ಲಖನೌ(11/10/2020): ಹಾಥರಸ್ನಲ್ಲಿ ಪರಿಶಿಷ್ಟ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಘಟನೆ ಜನರ ಮನದಿಂದ ಮರೆಯಾಗುವ ಮುನ್ನವೇ ಇನ್ನೊಂದು ಭಯಾನಕ ಅತ್ಯಾಚಾರ ಪ್ರಕರಣ ವರದಿಯಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.
ಲಖನೌನಿಂದ 300 ಕಿ.ಮೀ. ದೂರದಲ್ಲಿರುವ ಝಾನ್ಸಿ ಪಟ್ಟಣದಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 17 ವರ್ಷದ ಬಾಲಕಿ ಮೇಲೆ 12 ಜನ ಯುವಕರು ಭಾನುವಾರ ಸಾಮೂಹಿಕ ಅತ್ಯಾಚಾರ ಎಸಗಿರುವುದು ವರದಿಯಾಗಿದೆ. ಸಂತ್ರಸ್ತೆ ತನ್ನ ಗೆಳತಿಯನ್ನು ಭೇಟಿಯಾಗಲು ಸ್ನೇಹಿತನೊಂದಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರದ ವಿಡಿಯೋವನ್ನು ಯುವಕರು ಚಿತ್ರೀಕರಣ ಮಾಡಿದ್ದು, ಪೊಲೀಸರಿಗೆ ದೂರು ನೀಡಿದಲ್ಲಿ ವಿಡಿಯೊವನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ. 12 ಜನ ಯುವಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.