ಉತ್ತರ ಪ್ರದೇಶ(30-12-2020): ಉತ್ತರ ಪ್ರದೇಶ ಸರ್ಕಾರದ ವಿವಾದಾತ್ಮಕ ಮತಾಂತರ ವಿರೋಧಿ ಸುಗ್ರೀವಾಜ್ಞೆಯು ರಾಜ್ಯದಲ್ಲಿ ದ್ವೇಷ ರಾಜಕೀಯವನ್ನು ಹೆಚ್ಚಿಸಿದೆ. ಉತ್ತರ ಪ್ರದೇಶವು ವಿಭಜನೆ ಮತ್ತು ಧರ್ಮಾಂಧತೆಯ ರಾಜಕೀಯದ ಕೇಂದ್ರಬಿಂದುವಾಗಿದೆ ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಸೇರಿ 104 ಮಾಜಿ ಐಎಎಸ್ ಅಧಿಕಾರಿಗಳು ಸಹಿ ಮಾಡಿರುವ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.
ಕಾನೂನುಬಾಹಿರ ಸುಗ್ರೀವಾಜ್ಞೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಸಹಿ ಹಾಕಿದವರು, ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ರಾಜಕಾರಣಿಗಳನ್ನು ಆಗ್ರಹಿಸಿದ್ದಾರೆ. ನೀವು ಪ್ರಮಾಣವಚನ ಸ್ವೀಕರಿಸಿದ ಸಂವಿಧಾನದ ಬಗ್ಗೆ ಮರು-ಶಿಕ್ಷಣ ಪಡೆಯಬೇಕಾಗಿದೆ ಎಂದು ಹೇಳಿದ್ದಾರೆ.
ಒಂದು ಕಾಲದಲ್ಲಿ ಗಂಗಾ-ಜಮುನಾ ನಾಗರಿಕತೆಯ ತೊಟ್ಟಿಲು ಎಂದು ಕರೆಯಲ್ಪಡುವ ಯುಪಿ, ದ್ವೇಷ, ವಿಭಜನೆ ಮತ್ತು ಧರ್ಮಾಂಧತೆಯ ರಾಜಕೀಯದ ಕೇಂದ್ರಬಿಂದುವಾಗಿದೆ, ಮತ್ತು ಆಡಳಿತ ಸಂಸ್ಥೆಗಳು ಈಗ ಕೋಮು ವಿಷದಲ್ಲಿ ಮುಳುಗಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಉತ್ತರಪ್ರದೇಶದಾದ್ಯಂತದ ಯುವ ಭಾರತೀಯರ ವಿರುದ್ಧ ನಿಮ್ಮ ಆಡಳಿತವು ಮಾಡಿದ ಭೀಕರ ದೌರ್ಜನ್ಯಗಳ ಸರಣಿ ಮುಂದುವರಿದಿದೆ ಎಂದು ಸರಕಾರಕ್ಕೆ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.