ನವದೆಹಲಿ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಇನ್ನೆಷ್ಟು ತಲೆಮಾರುತನಕ ಮೀಸಲಾತಿ ಮುಂದುವರೆಯುತ್ತದೆ ಎಂದು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಶುಕ್ರವಾರ ಮರಾಠ ಮೀಸಲಾತಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಒಟ್ಟಾರೆ ಶೇಕಡ 50 ರಷ್ಟು ಮೀಸಲಾತಿ ಮಿತಿಯನ್ನು ತೆಗೆದುಹಾಕಿದರೆ ಉದ್ಬವಿಸುವ ಅಸಮಾನತೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ, ಮಹಾರಾಷ್ಟ್ರ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರಿಗೆ ಈ ರೀತಿಯಲ್ಲಿ ಹೇಳಿದ್ದಾರೆ. ಬದಲಾದ ಸಂದರ್ಭಗಳಲ್ಲಿ ಮಂಡಲ್ ತೀರ್ಪನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಪೀಠ ಹೇಳಿತು.
ಐತಿಹಾಸಿಕ ಮಂಡಲ್ ತೀರ್ಪಿನಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಶೇ.50ಕ್ಕೆ ಮಿತಿಗೊಳಿಸಲಾಗಿತ್ತು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ, ‘ನೀವು ಹೇಳಿದಂತೆ ಶೇ.50ರ ಮಿತಿ ಇರಬಾರದು ಅಥವಾ ಯಾವುದೇ ಮಿತಿಯೇ ಇರಬಾರದು ಎಂದಾದಲ್ಲಿ ಸಮಾನತೆಯ ಪ್ರಶ್ನೆ ಎಲ್ಲಿ ಬಂತು? ನಾವು ಅಂಥ ಪರಿಸ್ಥಿತಿಯನ್ನೂ ನಿರ್ವಹಿಸಬೇಕಲ್ಲವೇ? ಇದರ ಪರಿಣಾಮದಿಂದ ಸೃಷ್ಟಿಯಾಗುವ ಅಸಮಾನತೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದೇ ರೀತಿ ಎಷ್ಟುತಲೆಮಾರಿನವರೆಗೆ ಮೀಸಲು ಮುಂದುವರೆಸುತ್ತೀರಿ? ‘ಸ್ವಾತಂತ್ರ್ಯ ಬಂದು 70 ವರ್ಷಗಳೇ ಆಗಿವೆ. ರಾಜ್ಯಗಳು ಎಷ್ಟೊಂದೆಲ್ಲಾ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿವೆ. ಹೀಗಿರುವಾಗ ಯಾವುದೇ ಹಿಂದುಳಿದ ಸಮುದಾಯ ಅಭಿವೃದ್ಧಿಯೇ ಆಗಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕೇ? ಎಂದು ಮರು ಪ್ರಶ್ನೆ ಹಾಕಿತು. ಜೊತೆಗೆ ನಾವು ಮಂಡಲ್ ಆಯೋಗದ ವರದಿಯನ್ನು ಮರು ಪರಿಶೀಲನೆ ಮಾಡಬೇಕಿರುವ ಉದ್ದೇಶ, ಯಾರು ಇನ್ನೂ ಹಿಂದುಳಿದ ಸ್ಥಿತಿಯಲ್ಲಿ ಇದ್ದಾರೋ ಅವರನ್ನು ಮುಂದೆ ತರಲು ಎಂದು ಪೀಠ ಸ್ಪಷ್ಟಪಡಿಸಿದೆ.