ವಿಜಯಪುರ(20/10/2020): ರಾಜ್ಯ ಬಿಜೆಪಿಯೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಜಗಜ್ಜಾಹೀರಾಗುತ್ತಿದೆ. ಇದೀಗ ಬಿಜೆಪಿ ಹಿರಿಯ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಾಯಿಸುವ ಬಗ್ಗೆ ಹೈಕಮಾಂಡ್ ಚಿಂತಿಸುತ್ತಿದೆ ಎಂದು ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ ಯಡಿಯೂರಪ್ಪನವರು ಹೈಕಮಾಂಡ್ ಗೆ ಸಾಕಾಗಿ ಹೋಗಿದ್ದಾರೆ. ಶೀಘ್ರದಲ್ಲೇ ಉತ್ತರ ಕರ್ನಾಟಕದವರನ್ನು ಮುಖ್ಯಮಂತ್ರಿ ಮಾಡುವುದಾಗಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
`ಯಡಿಯೂರಪ್ಪನವರು ಎಲ್ಲಾ ಅನುದಾನವನ್ನು ಶಿವಮೊಗ್ಗಕ್ಕೇ ಕೊಂಡೊಯ್ಯುತ್ತಿದ್ದಾರೆ. ನನ್ನ ಕ್ಷೇತ್ರಕ್ಕೆ ಅನುದಾನ ಸಿಗದೆ ಅಭಿವೃದ್ಧಿ ಕುಂಠಿತವಾಗಿದೆ. ಈ ಬಗ್ಗೆ ನನಗೂ ಅವರಿಗೂ ಮನಸ್ತಾಪವಾಗಿದೆ. ಉತ್ತರ ಕರ್ನಾಟಕದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ದಕ್ಷಿಣ ಕರ್ನಾಟಕದವರು ಪದೇ ಪದೇ ಮುಖ್ಯಮಂತ್ರಿಯಾಗುತ್ತಿರುವುದು ಅನ್ಯಾಯ’ ಎಂದು ಯತ್ನಾಳ್ ಹೇಳಿದ್ದಾರೆ.