-ಗಂಗಾಧರ ಸ್ವಾಮಿ
ಮನೆ ಮನೆ ಕತೆ ೧:
ಸುಮಾರು ಎಪ್ಪತ್ತು ವರ್ಷ ದಾಟಿದ ಆ ಅಜ್ಜಿ ದೊಡ್ಡ ದಪ್ಪನೆಯ ಕನ್ನಡಕ ಹಾಕೊಂಡು ಊರ ಮುಂದಿನ ಬಸ್ ಸ್ಡ್ಯಾಂಡಿನಲ್ಲಿ ಬಸ್ ಇಳಿದು ನಿಧಾನಕ್ಕೆ ಊರಿನತ್ತ ಬರ್ತಾ ಇದ್ದಿದ್ದನ್ನು ನೋಡಿ ಒಮ್ಮೆಲೆ ಗಾಬರಿಯಾದ ಆತ “ಅಯ್ಯೋ! ನಿನ್ ಮನೆ ಕಾಯೋಗ! ಮೂರು ದಿನದಿಂದ ಎಲ್ಲಿ ಹಾಳಾಗೊಗಿದ್ದೆ? ನೀ ಎಲ್ಲೋ ಹೊಳೆ ನೀರಿಗೆ ಬಿದ್ದು ಸತ್ತೋಗಿದ್ದೀಯಾ ಅಂತಾ ನಿನ್ ಮಕ್ಕಳು ಹೆದರ್ಕಂಡಿದ್ದರು. ನೀ ನೋಡಿದ್ರೆ ಈಗ ಕುಂಟ್ಕುಂಟ್ಕಂಡು ವಾಲ್ಕಾಂಡೂ ಬತ್ತಾ ಇದೀಯೆ?”
“ಹುಕಣಪ್ಪ! ನಾ ಹೊಳ ನೀರ್ಗ ಬಿದ್ಕಂಡು ಪರಿಸ್ಥಿತಿಯೇ ಈಗ ನನ್ಗ ಬಂದದೇ. ನಾ ಕಣ್ಣ ಕಾಣಲ್ಲಂತ ವರ್ಷದಿಂದ ಒದ್ಡಾಡ್ಕಂಡು ಬಿದ್ದಿದ್ರೂವೇ ಒಬ್ಬ ಬೇವರ್ಸಿ ಮಗನೂವೆ, ನೀ ಬವ್ವಾ ಅಂತಾ ಆಸ್ಪತ್ರಗ್ ಕರ್ಕೋ ಹೋಗ್ನಿಲ್ಲ. ಈಗ ನಾ ಸತ್ರೇ ಅವರಿಗ ದುಕ್ಕವಾದ್ದ? ಬುಟ್ಟಾಕು. ನಾನು ನಸೀಪುರಕ್ಕ ಹೋಗಿ ಕಣ್ಣ ಆಪರೇಷಣ್ ಮಾಡಿಸ್ಕಂಡು ಬತ್ತಾವ್ನೀ.” ಅಂತೇಳಿ ಆ ಅಜ್ಜಿ, ಮನೆ ಕಡೆಗೆ ನಡ್ಕಂಡು ಹೋಯ್ತು.
ಆ ಅಜ್ಜಿಗೆ ನಾಲ್ಕು ಗಟ್ಟಿಮುಟ್ಟಾದ ಗಂಡು ಮಕ್ಕಳು, ಹನ್ನೆರಡಕ್ಕೂ ಹೆಚ್ಚು ಮೊಮ್ಮಕ್ಕಳು ಇದ್ದಾರೆ. ಆ ಅಜ್ಜಿ ತನ್ನ ಹಳೆಯ ಮನೆಯಲ್ಲಿ ತಾನೇ ಅನ್ನ, ಉಪ್ನೀರು ಬೇಯಿಸ್ಕಂಡು ಮನೆ ಕಸ ಗುಡಿಸ್ಕಂಡು ಕಾಲ ಕಳೀತಾ ಅದೆ.
ಮನೆ ಮನೆ ಕತೆ ೨:
ಕರೋನಾ ಸಮಯದಲ್ಲಿ ಅಮ್ಮನಿಗೆ ಪೋನ್ ಮಾಡಿದ್ದಾಗ ಇವತ್ತು ಕುರವಟ್ಟಿ ನಂಜುಂಡಪ್ಪ ಸತ್ತೋದ ಅಂದ್ರು, ಏನಾಗಿತ್ತು ಅಂದೆ. ನೇಣು ಹಾಕಿಕೊಂಡು ಸತ್ತೋದ ಅಂದ್ರು. ಅಯ್ಯೋ ಅನ್ನಿಸ್ತು. ಹೋದ ವರ್ಷ ಅವರ ಪಕ್ಕದ ಮನೆ ನಾಗರಾಜಪ್ಪನೂವೇ ನೇಣ್ಕಂಡು ಸತ್ತೋಗಿದ್ರು ಅಲ್ವಾ ಅಂದೆ. ಅಮ್ಮ ಹೂ ಅಂದ್ರು.
ನಾಗರಾಜಪ್ಪ ಮತ್ತು ಮಂಗಳಮ್ಮ ದಂಪತಿಗೆ ವಯಸ್ಸಾಗಿತ್ತು, ಅವರಿಗೆ ಮಕ್ಕಳಿರಲಿಲ್ಲ ಚನ್ನಾಗಿದ್ದಾಗ ಒಂದು ಅಂಗಡಿ ಇಟ್ಕಂಡು ಜೀವನ ಮಾಡ್ತಾ ಇದ್ರು, ಸ್ವಲ್ಪ ಜಮೀನು ಕೂಡಾ ಇತ್ತು. ವಯಸ್ಸಾಗಿ ಕಾಲು,ಕೈಯಲ್ಲಿ ಶಕ್ತಿ ಕಡಿಮೆ ಆದಮೇಲೆ ಅಂಗಡಿ ಮುಚ್ಚಿ ಮನೆಯಲ್ಲಿ ಇದ್ರು. ಅವರಿಗೆ ಆರೋಗ್ಯ ಸಮಸ್ಯೆ ಶುರುವಾಗಿತ್ತು. ಜೀವನ ಮಾಡೋದು ಕಷ್ಟ ಅಂತಾ ಅನಿಸಿ ಒಂದು ದಿನ ನೇಣಿಗೆ ಶರಣಾದ್ರು.
ಇನ್ನೂ ಆ ನಂಜುಂಡಪ್ಪ ಊರಿನ ಯಜಮಾನನಾಗಿದ್ದವರು. ಮನೆ, ಜಮೀನು, ಅಂಗಡಿ ಮನೆ ಎಲ್ಲವೂ ಇತ್ತು. ಸಂಪಾದನೆ ಚನ್ನಾಗಿಯೇ ಇತ್ತು. ಮೂರು ಜನ ಗಂಡು ಮಕ್ಕಳು ಓದಿ, ಕೆಲಸ ಹಿಡಿದು ಮೂರು ದಿಕ್ಕಿನಲ್ಲಿ ವಾಸ ಮಾಡ್ತಾ ಇದ್ದಾರೆ. ಮನೆಯಲ್ಲಿ ಕಮಲಕ್ಕ ಮತ್ತು ನಂಜುಂಡಣ್ಣ ಮಾತ್ರ ಇದ್ರು. ಈ ಕರೋನಾ ಬಂದು ಕಮಲಕ್ಕ ತೀರಿ ಹೋದ ಒಂದೇ ವಾರಕ್ಕೆ ನಂಜುಂಡಪ್ಪನವರಿಗೆ ಊಟ, ತಿಂಡಿ, ಮನೆ ಸ್ವಚ್ಛ ಮಾಡಲೂ ಕಷ್ಟ ಶುರುವಾಯ್ತು. ಹಳ್ಳಿ ಬಿಟ್ಟು ಹೋಗಲೂ ಅವರಿಗೆ ಮನಸ್ಸು ಇರಲಿಲ್ಲ, ಗಂಡು ಮಕ್ಕಳು ಮತ್ತು ಸೊಸೆಯಂದಿರಿಗೂ ಅವರನ್ನು ಕರೆದುಕೊಂಡು ಹೋಗಲೂ ಮನಸ್ಸು ಇರಲಿಲ್ಲ.. ಈ ನಡುವೆ ಅವರಿಗೂ ಜ್ವರ, ಕೆಮ್ಮು ಶುರುವಾಯ್ತು. ಒಮ್ಮೆ ಆಸ್ಪತ್ರೆಗೆ ಹೋಗಿಬಂದರು. ಮನೆಯಲ್ಲಿಯೇ ಒಬ್ಬರೇ ಒಂಟಿಯಾಗಿ ಇದ್ರು. ಮರುದಿನ ಪಕ್ಕದ ಮನೆಯವರು ನೋಡಿದಾಗ ಅವರೂ ನೇಣಿಗೆ ಶರಣಾಗಿದ್ದ್ರು.
ಹುಟ್ಟಿದ ಊರಿನಿಂದ ಹೊರಗೆ ಹಾಕುವ ಈಗಿನ ಓದು, ಉದ್ಯೋಗ, ಊರಿನಲ್ಲಿಯೇ ಇದ್ರೂ ಹೆತ್ತವರನ್ನೂ ಸಾಕಲಾಗದ ಮನಸ್ಥಿತಿಗೆ ಕಾರಣಗಳೇನು? ಇಂತಹ ಸಾಮಾಜಿಕ ಸಮಸ್ಯೆಗಳು ಯಾಕೆ ಅಧ್ಯಯನದ ವಿಷಯಗಳಾಗುತ್ತಿಲ್ಲ? ಇದನ್ನು ಯಾರು, ಎಲ್ಲಿ ಚರ್ಚಿಸಿಬೇಕು, ಸೂಕ್ತ ಪರಿಹಾರ ಹುಡುಕಬೇಕು? ಮಠ, ಮಾನ್ಯಗಳು, ಸರ್ಕಾರಕ್ಕೆ ಇವುಗಳನ್ನೂ ಚರ್ಚಿಸಲೂ ಆದ್ಯತೆಯ ಹೊಣೆಗಾರಿಕೆಯ ವಿಷಯಗಳಲ್ಲವಾ?
ಹಿಂದೆ ಸಮಾಜದಲ್ಲಿ ಸೃಷ್ಟಿಯಾಗುತ್ತಿದ್ದ ಸಮಸ್ಯೆಗಳನ್ನು ಪುರಾತನರೂ ಬಗೆಹರಿಸುತ್ತಿದ್ದ ಬಗೆಯಾದರೂ ಹೇಗೆ ಇತ್ತು? ಈ ಗಂಡ,ಹೆಂಡತಿ, ಮನೆ, ಮಕ್ಕಳು, ಮದುವೆ ಕುಟುಂಬ ಅನ್ನುವ ವ್ಯವಸ್ಥೆ ಹುಟ್ಟಿದಾದರೂ ಯಾಕೆ? ಹೇಗೆ? ಉಳುಮೆ ಮಾಡಲೂ, ಸರಕು ಸಾಗಿಸಲೂ ಟ್ರಾಕ್ಟರ್ ಇರುವಾಗ ಈಗ ಉಳುಮೆ ಮಾಡಲೂ, ಬಂಡಿ ಹೊಡೆಯಲೂ ಎತ್ತುಗಳು ಬೇಕಿಲ್ಲ. ಹಾಲು ಕೊಡಲೂ ಹಸು ಸಾಕಷ್ಟೇ. ಈಗಿರುವ ಹಾಲಿಗೆ ರೈತನಿಗೆ ಸಿಗುತ್ತಿರುವ ಹಣ ಮೇವಿಗೆ ಸಾಲುತ್ತಿಲ್ಲ. ಸಾವಿರಾರು ದನಕರು, ಎಮ್ಮೆಗಳಿದ್ದ ನನ್ನ ಹಳ್ಳಿಯಲ್ಲಿ ಈಗ ಅವನ್ನೂ ದುರ್ಬೀನು ಹಾಕಿ ಹುಡುಕಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಗೋರಕ್ಷಣೆ ಕಾನೂನು ಯಾರನ್ನೂ ಕಾಪಾಡಲಿದೆ? ಅದೂ ನಿಜಕ್ಕೂ ನಮ್ಮ ಹಳ್ಳಿಯ ದನಕರುಗಳನ್ನು, ಸಂತತಿಯನ್ನು ರಕ್ಷಿಸಲಿದೆಯಾ?
ಯಾವುದೇ ಸಮಸ್ಯೆಯನ್ನು ಆಳವಾಗಿ ಅಧ್ಯಯನ ಮಾಡದೇ, ಪರಿಹಾರ ಹುಡುಕಲೂ ಪ್ರಾಮಾಣಿಕ ಪ್ರಯತ್ನ ಮಾಡದೇ ಅಳಸು, ಬಳಸು ಮಾತನಾಡುತ್ತಾ, ಮನಸ್ಸಿಗೆ ಬಂದ ಕಾನೂನುಗಳನ್ನು ಮಾಡುತ್ತಾ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೇ ಅವನ್ನೂ ಉಲ್ಬಣವಾಗಲೂ ಬಿಟ್ಟೂ ಸಮಾಜವನ್ನೂ ದಿನದಿನಕ್ಕೂ ವಿಘಟಿಸುತ್ತಾ ಇರುವ ಈ ಪರಿ ನೋಡಿದರೇ….. ನಮ್ಮ ಮುಂದಿನವರ ಭವಿಷ್ಯ ತೀರಾ ಕರಾಳವಾಗಲಿದೆ.