ಮುಂಬೈ(09/10/2020): ಲೇಖಕಿಯೊಬ್ಬರು ಜ್ಯುವೆಲ್ಲರಿ ಅಂಗಡಿ ಮುಂಭಾಗದಲ್ಲಿ ಸುಮಾರು 20 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದ ಘಟನೆ ಮುಂಬೈನಲ್ಲಿ ನಡೆದಿದೆ.
ಮರಾಠಿ ಭಾಷೆಯ ಲೇಖಕಿ ಶೋಭಾ ದೇಶ್ ಪಾಂಡೆ ಅವರು ಚಿನ್ನದ ಅಂಗಡಿಗೆ ಭೇಟಿ ನೀಡಿದ್ದರು. ಅಂಗಡಿ ಮಾಲಕ ಹಿಂದಿಯಲ್ಲಿ ಮಾತನಾಡಿದ್ದು, ಕಂಡು ಮರಾಠಿಯಲ್ಲಿ ಮಾತನಾಡುವಂತೆ ಲೇಖಕಿ ತಾಕೀತು ಮಾಡಿದ್ದರು. ಆದರೆ, ಮಾಲಕ ಅಂಗಡಿಯಿಂದ ಹೊರನಡೆಯುವಂತೆ ತಾಕೀತು ಮಾಡಿದ್ದು, ಲೇಖಕಿಯ ಪ್ರತಿಭಟನೆಗೆ ಕಾರಣವಾಗಿದೆ.
ತಕ್ಷಣವೇ ಲೇಖಕಿ ಜ್ಯುವೆಲ್ಲರಿ ಶಾಪ್ ನ ಹೊರಭಾಗದ ಫೂಟ್ ಪಾತ್ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದರು. ನಂತರ ಶುಕ್ರವಾರ ಜ್ಯುವೆಲ್ಲರ್ ಶಾಪ್ ಮಾಲೀಕ ಶಂಕರ್ ಲಾಲ್ ಜೈನ್ ಶೋಭಾ ದೇಶ್ ಪಾಂಡೆ ಜತೆ ಕ್ಷಮೆಯಾಚಿಸಿರುವುದಾಗಿ ವರದಿ ತಿಳಿಸಿದೆ.
ಶೋಭಾ ದೇಶಪಾಂಡೆ ಪ್ರತಿಭಟನೆಗೆ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ್ ಸೇನಾ(ಎಂಎನ್ ಎಸ್) ಬೆಂಬಲ ಸೂಚಿಸಿತ್ತು. ಅಷ್ಟೇ ಅಲ್ಲ ಕ್ಷಮೆ ಕೇಳದಿದ್ದರೆ ಶಂಕರ್ ಲಾಲ್ ಜೈನ್ ಮರಾಠಿ ಕಲಿಯುವವರೆಗೂ ಜ್ಯುವೆಲ್ಲರಿ ಅಂಗಡಿ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು.