ಬೆಂಗಳೂರು: ‘ಹಿಜಾಬ್ ಹಾಗೂ ಕೇಸರಿ ಶಾಲು ವಿಚಾರಗಳ ನಡುವೆ ರಾಜಧಾನಿ ಬೆಂಗಳೂರಿನ ನಾನಾ ಭಾಗಗಳಲ್ಲಿ ವಿದ್ಯಾರ್ಥಿನಿಯರು, ಯುವತಿಯರು ಸಂವಿಧಾನದಡಿಯ ಧಾರ್ಮಿಕ ಹಕ್ಕುಗಳನ್ನು ಗೌರವಿಸುವಂತೆ ಭಿತ್ತಿ ಪತ್ರಗಳನ್ನು ಅಂಟಿಸಿ ಸಾರ್ವಜನಿಕರ ಗಮನ ಸೆಳೆದರು.
ರವಿವಾರ ಇಲ್ಲಿನ ಕಬ್ಬನ್ಪಾರ್ಕ್, ಬಸ್ ನಿಲ್ದಾಣಗಳು, ಪಾದಚಾರಿ ಮಾರ್ಗಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್, ಸಂವಿಧಾನ ಸೇರಿದಂತೆ ನಾನಾ ಬಗೆಯ ಚಿತ್ರಗಳೊಂದಿಗೆ ವಿದ್ಯಾರ್ಥಿನಿಯರು, ಯುವಕರು ಧಾರ್ಮಿಕ ಸ್ವತಂತ್ರ್ಯ ಹಕ್ಕುಗಳನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ವಿಶೇಷ ಅಭಿಯಾನ ನಡೆಸಿ ಮನವಿ ಮಾಡಿದರು.
ಭಾರತದ ಸಂವಿಧಾನವು ದೇಶದ ಪ್ರಜಾಪ್ರಭುತ್ವ ಸಮಾಜವಾದ ಜಾತ್ಯತೀತತೆ, ರಾಷ್ಟ್ರೀಯ ಸಮಗ್ರತೆಯನ್ನು ಹೊಂದಿದ್ದು, ಇಂತಹ ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ವಿದ್ಯಾರ್ಥಿನಿಯರು ನುಡಿದರು.