ಮಂಡ್ಯ(23-01-2021): ಸರಕಾರವನ್ನು ಟೀಕಿಸುವುದು ಅಪರಾಧವೇ? ಸರಕಾರವನ್ನು ಟೀಕಿಸಿದ್ರೆ ಜನರಿಗೆ ಶಿಕ್ಷೆ ನೀಡುವುದಾ? ಇಂತಹ ಒಂದು ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದ್ದು, ಚುನಾಯಿತ ಸರಕಾರಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವುದಕ್ಕೆ ಮತ್ತೊಂದು ನಿದರ್ಶನ ಮಂಡ್ಯದಲ್ಲಿ ವರದಿಯಾಗಿದೆ. ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಜನರ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.
ಮಂಡ್ಯ ತಾಲೂಕು ಸಾಹಿತ್ಯ ಸಮ್ಮೇಲನದಲ್ಲಿ ಎನ್ಡಿಎ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದ ಹಿರಿಯ ಸಂಶೋಧಕ, ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಮಂಡ್ಯ ಪೊಲೀಸರು ಠಾಣೆಗೆ ಕರೆದು ವಿಚಾರಣೆ ನಡೆಸಿರುವುದು ಸಾಹಿತ್ಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಹಂಪನಾ ಅವರು ಕೇಂದ್ರ ಸರ್ಕಾರವನ್ನು ಟೀಕಿಸುವ ವೇಳೆ ದುರ್ಯೋಧನ, ಗೋಮುಖ ವ್ಯಾಘ್ರ ಎಂಬ ಪದಗಳನ್ನು ಬಳಸಿದ್ದರು. ಇದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತರು ಸಾಹಿತಿ ಹಂಪನಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸಾಹಿತಿಯನ್ನು ಠಾಣೆಗೆ ಕರೆದು ವಿಚಾರಣೆಯನ್ನು ನಡೆಸಿದ್ದಾರೆ. ಪೊಲೀಸರ ನಡೆ ಬಗ್ಗೆ ಸುದ್ದಿಯಾಗುತ್ತಿದ್ದಂತೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.