ನವದೆಹಲಿ (19-11-2020): ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳ ಸಾಲು ಸಾಲು ದಿವಾಳಿ ಜನಸಾಮಾನ್ಯರಿಗೆ ಹಲವು ಪಾಠಗಳನ್ನು ಕಲಿಸಿದೆ. ಕೇವಲ 5 ಲಕ್ಷ ರೂ.ಗಳನ್ನು ಮಾತ್ರ ಬ್ಯಾಂಕಿನಲ್ಲಿ ಇಡುವುದು ಒಳ್ಳೆಯದು ಎನ್ನುವಂತಾಗಿದೆ. ಮುಂಬೈ ಮೂಲದ ಅತಿದೊಡ್ಡ ಪಿಎಮ್ಸಿ ಬ್ಯಾಂಕ್ ಸೇರಿದಂತೆ ಹಲವಾರು ಸಹಕಾರಿ ಬ್ಯಾಂಕುಗಳು ಕಳೆದ ವರ್ಷ ನಿರ್ಬಂಧಕ್ಕೆ ಒಳಗಾದವು. ಠೇವಣಿ ಇಟ್ಟ ತಪ್ಪಿಗೆ ಹಲವರು ಜನರು ಹೃದಯಾಘಾತ, ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವನವನ್ನು ಕೊನೆಗೊಳಿಸಿದರು.
ಇದಾದ ಬಳಿಕ ಠೇವಣಿ ವಿಮಾ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಜಿಸಿ) ಠೇವಣಿ ವಿಮಾ ರಕ್ಷಣೆಯನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಲು ಬಜೆಟ್ ನಲ್ಲಿ ಅನುಮತಿ ನೀಡಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಡಿಐಜಿಸಿ ಬ್ಯಾಂಕ್ ಠೇವಣಿಗಳಿಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಬ್ಯಾಂಕಿನಲ್ಲಿರುವ ಪ್ರತಿ ಠೇವಣಿದಾರನು ಬ್ಯಾಂಕ್ ದಿವಾಳಿಯಾದಲ್ಲಿ ಗರಿಷ್ಠ 5 ಲಕ್ಷ ರೂ.ವರೆಗೆ ವಿಮಾ ರಕ್ಷಣೆಯನ್ನು ಪಡೆಯಬಹದು. 5 ಲಕ್ಷಕ್ಕಿಂತ ಹೆಚ್ಚು ಠೇವಣಿ ಇಟ್ಟವರ ಗತಿಯೇನು ಎಂಬ ಪ್ರಶ್ನೆ ಸಾಮಾನ್ಯವಾದುದು.
ಇನ್ನು ವಿವಿಧ ಬ್ಯಾಂಕುಗಳಲ್ಲಿನ ಠೇವಣಿಗಳನ್ನು ಪ್ರತ್ಯೇಕವಾಗಿ ವಿಮೆ ಮಾಡಲಾಗಿದೆಯೇ? ಉತ್ತರ ಹೌದು, ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ಠೇವಣಿ ಹೊಂದಿದ್ದರೆ, ನೀವು ಠೇವಣಿ ಹೊಂದಿರುವ ಪ್ರತಿಯೊಂದು ಬ್ಯಾಂಕುಗಳಲ್ಲಿನ ಠೇವಣಿಗಳಿಗೆ ಠೇವಣಿ ವಿಮಾ ರಕ್ಷಣೆಯ ಮಿತಿಯನ್ನು ಪ್ರತ್ಯೇಕವಾಗಿ ಅನ್ವಯಿಸಲಾಗುತ್ತದೆ. ಪ್ರತಿ ಬ್ಯಾಂಕಿನಿಂದ ನಿಮ್ಮ ಹಣವನ್ನು ಪ್ರತ್ಯೇಕವಾಗಿ ವಿಮೆ ಮಾಡಲಾಗುವುದು, ಉದಾಹರಣೆಗೆ ನೀವು ಎರಡು ವಿಭಿನ್ನ ಬ್ಯಾಂಕುಗಳಲ್ಲಿ ಠೇವಣಿಗೆ ಹಣವನ್ನು ಹೊಂದಿದ್ದರೂ ಸಹ, ಮತ್ತು ಆ ಎರಡು ಬ್ಯಾಂಕುಗಳು ಒಂದೇ ದಿನದಲ್ಲಿ ಮುಚ್ಚಲ್ಪಟ್ಟರೆ ಪ್ರತ್ಯೇಕವಾಗಿ ವಿಮೆ ಸಿಗಲಿದೆ.
ಯಾವ ಬ್ಯಾಂಕುಗಳನ್ನು ಡಿಐಜಿಸಿಸಿ ವಿಮೆ ಮಾಡುತ್ತದೆ?
ಭಾರತದ ವಿದೇಶಿ ಬ್ಯಾಂಕುಗಳ ಶಾಖೆಗಳನ್ನು ಒಳಗೊಂಡಿರುವ ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಸ್ಥಳೀಯ ಪ್ರದೇಶ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಡಿಐಜಿಸಿಸಿ ವಿಮೆ ನೀಡಲಾಗುತ್ತದೆ. ಎಲ್ಲಾ ರಾಜ್ಯ, ಕೇಂದ್ರ ಮತ್ತು ಪ್ರಾಥಮಿಕ ಸಹಕಾರಿ ಬ್ಯಾಂಕುಗಳು, ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರಸ್ತುತ ಎಲ್ಲಾ ಸಹಕಾರಿ ಬ್ಯಾಂಕುಗಳು ಡಿಐಜಿಸಿಸಿ ವ್ಯಾಪ್ತಿಗೆ ಬರುತ್ತವೆ.