ವಾಟ್ಸಪ್ ಗ್ರೂಪಿನ ಸದಸ್ಯರ ತಪ್ಪುಗಳಿಗೆ ಅಡ್ಮಿನ್ನನ್ನು ಅಪರಾಧಿಯೆಂದು ಪರಿಗಣಿಸಲಾಗದು : ಬಾಂಬೆ ಹೈಕೋರ್ಟ್ | ಆದರೆ…

Share on facebook
Share on twitter
Share on linkedin
Share on whatsapp
Share on telegram
Share on email
Share on print

ನಾಗ್ಪುರ: ವಾಟ್ಸಪ್ ಗ್ರೂಪಿನ ಸದಸ್ಯರು ಮಾಡಿದ ತಪ್ಪುಗಳಿಗೆ ಅದರ ಅಡ್ಮಿನ್ನನ್ನು ಅಪರಾಧಿ ಎಂದು ಪರಿಗಣಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟಿನ ನಾಗ್ಪುರ ಬೆಂಚ್ ಅಭಿಪ್ರಾಯಪಟ್ಟಿದೆ.

ವಾಟ್ಸಪ್ ಗುಂಪಿನ ಒಬ್ಬ ಅಥವಾ ಕೆಲವು ಸದಸ್ಯರು ಅವಹೇಳನಾಕಾರಿಯಾದ ಪೋಸ್ಟುಗಳನ್ನು ಹಾಕಿದರೆ ಅದರ ಹೊಣೆಯನ್ನು ಅಡ್ಮಿನಿನ ಹೆಗಲಿಗೆ ಹಾಕುವಂತಿಲ್ಲ. ಕಾರಣದಿಂದ ಅಡ್ಮಿನ್ನನ್ನು ಅಪರಾಧಿಯೆಂದು ಪರಿಗಣಿಸುವ ಹಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅದೇ ವೇಳೆ, ಅಡ್ಮಿನಿಗೆ ಗೊತ್ತಿದ್ದೂ, ಆತನ ಬೆಂಬಲದೊಂದಿಗೆ ಸಂಘಟಿತವಾಗಿ ನಡೆಯುವ ತಪ್ಪುಗಳಿಗೆ ಮಾತ್ರವೇ ಅಡ್ಮಿನ್ನನ್ನು ಅಪರಾಧಿ ಎಂದು ಪರಿಗಣಿಸಬಹುದಾಗಿದೆ ಎಂದಿದೆ.

ಒಂದು ವಾಟ್ಸಪ್ ಗುಂಪಿನ ಮಹಿಳಾ ಸದಸ್ಯೆಯ ವಿರುದ್ಧ, ಅದೇ ಗುಂಪಿನ ಮತ್ತೊಬ್ಬರು ಅವಹೇಳನಾಕಾರಿಯಾಗಿ ಟೀಕೆ ಮಾಡಿದ್ದರು. ವಿಚಾರವಾಗಿ ಗ್ರೂಪಿನ ಅಡ್ಮಿನ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದನ್ನು ತೆಗೆದು ಹಾಕಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಡಿವಿಷನ್ ಬೆಂಚ್ ಅಭಿಪ್ರಾಯವನ್ನು ತಾಳಿದೆ.

ಒಂದು ವಾಟ್ಸಪ್ ಗ್ರೂಪ್ ರಚಿಸಿದರೆ ಅದರ ಸದಸ್ಯರೆಲ್ಲರೂ ಸಾಮಾನ್ಯವಾಗಿ ಒಂದೇ ರೀತಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಆದರೆ ಅದರಲ್ಲಿ ಅಡ್ಮಿನಿಗೆ ಮಾತ್ರ ಹೊಸ ಸದಸ್ಯರನ್ನು ಸೇರಿಸಲು ಮತ್ತು ಇರುವವರನ್ನು ತೆಗೆದು ಹಾಕಲು ಸಾಧ್ಯವಿದೆ.

ಗ್ರೂಪಿನ ಸದಸ್ಯರು ಏನೆಲ್ಲಾ ಯೋಚಿಸುತ್ತಾರೆ, ಏನೆಲ್ಲಾ ಮಾಡಲಿದ್ದಾರೆ ಎಂಬುದನ್ನೆಲ್ಲಾ ಮೊದಲೇ ತಿಳಿದುಕೊಳ್ಳಲು ಅಡ್ಮಿನಿಗೆ ಸಾಧ್ಯವಾಗುವುದಿಲ್ಲ. ಜೊತೆಗೆ ಸದಸ್ಯರ ಪೋಸ್ಟುಗಳನ್ನು ಸೆನ್ಸರ್ ಮಾಡಲೂ ಆತನಿಂದ ಸಾಧ್ಯವಿಲ್ಲ. ಹಾಗಾಗಿ ಒಂದು ವಾಟ್ಸಪ್ ಗುಂಪು ರಚಿಸಿದವನು ತನಗೆ ಗೊತ್ತಿಲ್ಲದೇ, ತನ್ನ ಸಹಭಾಗಿತ್ವವಿಲ್ಲದೇ ಗುಂಪಿನ ಇತರ ಸದಸ್ಯರು ಮಾಡುವ ತಪ್ಪುಗಳಿಗೆ ಹೊಣೆಗಾರನಾಗುವುದಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು