ಲಕ್ನೋ(7-12-2020): ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧದ ಹೋರಾಟದ ಸಮಯದಲ್ಲಿ ಪ್ಯಾರಾ ಮಿಲಿಟರಿ ಪಡೆಯು ರೈತರ ವಿರುದ್ಧ ಲಾಠಿ ಬೀಸಿತ್ತು. ಆ ಸಮಯದಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ವೃದ್ಧ ರೈತನ ಮೇಲೆ ಬಲವಾಗಿ ಲಾಠಿ ಬೀಸುತ್ತಿರುವ ಚಿತ್ರವೊಂದು ವೈರಲಾಗಿತ್ತು.
ಇದೀಗ ಆ ಚಿತ್ರವನ್ನು ಸೆರೆ ಹಿಡಿದ ಛಾಯಾಚಿತ್ರ ಪತ್ರಕರ್ತನ ಮೇಲೆ ಕೇಂದ್ರ ಸರ್ಕಾರದ ಮುದ್ರೆಯಿರುವ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡವು ದಾಳಿ ನಡೆಸಿದೆ. ಪಿಟಿಐಯ ಛಾಯಾಚಿತ್ರ ಪತ್ರಕರ್ತನೂ, ದೆಹಲಿ ನಿವಾಸಿಯೂ ಆದ ರವಿ ಚೌಧರಿ ಈ ವಿಚಾರವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ದುಷ್ಕರ್ಮಿಗಳು ಬಂದ ವಾಹನ ಸಂಖ್ಯೆ ಕೊಟ್ಟರೂ ಉತ್ತರ ಪ್ರದೇಶ ಪೋಲೀಸರು ಎಫ್ಐಆರ್ ದಾಖಲಿಸಿಲ್ಲವೆಂದು ಅವರು ದೂರಿಕೊಂಡಿದ್ದಾರೆ.
ದೆಹಲಿ ಗಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟಸುತ್ತಿದ್ದ ರೈತರ ಮೇಲೆ ಪ್ಯಾರ ಮಿಲಿಟರಿ ಪಡೆಯು ಲಾಠಿ ಚಾರ್ಜ್ ನಡೆಸಿತ್ತು. ಆ ವೇಳೆಯಲ್ಲಿ ಸೆರೆ ಹಿಡಿಯಲಾದ ಈ ಚಿತ್ರವು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೇ ಅಂತರಾಷ್ಟ್ರೀಯ ಗಮನವನ್ನೂ ಸೆಳೆದಿತ್ತು. ಈ ವಿಚಾರವನ್ನಿಟ್ಟು ಪ್ರತಿ ಪಕ್ಷಗಳು ಸರಕಾರದ ವಿರುದ್ಧ ಟೀಕೆಗಳನ್ನೂ ನಡೆಸಿದ್ದವು.
ಛಾಯಾಚಿತ್ರ ಪತ್ರಕರ್ತನಾದ ರವಿಯು ಈ ಮೊದಲು ಹಲವು ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಅವರ ಮೇಲಿನ ದಾಳಿಗೂ, ವೈರಲ್ ಚಿತ್ರಕ್ಕೂ ಸಂಬಂಧವಿದೆಯೇ ಎಂದು ತಿಳಿದು ಬಂದಿಲ್ಲ