ಬೆಂಗಳೂರು(07/11/2020): ‘ಸಿಬಿಐಯನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಂಡು ಬಿಜೆಪಿ ಸರ್ಕಾರ ನಮ್ಮ ಪಕ್ಷದ ನಾಯಕ ವಿನಯ ಕುಲಕರ್ಣಿ ಅವರನ್ನು ಬಂಧಿಸಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.
ಟ್ವೀಟ್ ಮಾಡಿ ಅವರು, ‘ಇದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿಯ ರಾಜಕೀಯ ಪಿತೂರಿಯನ್ನು ಎತ್ತಿ ತೋರಿಸುತ್ತದೆ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಇಂಥ ಬೆದರಿಕೆಯ ತಂತ್ರಗಳಿಗೆ ಎಂದಿಗೂ ಜಗ್ಗುವುದಿಲ್ಲ ಎಂಬುದನ್ನು ಯಡಿಯೂರಪ್ಪನವರು ಅರ್ಥ ಮಾಡಿಕೊಳ್ಳಬೇಕು. ಅಸ್ಥಿರ ಯಡಿಯೂರಪ್ಪ ಸರ್ಕಾರ ತನ್ನ ಮುಂಚೂಣಿ ಘಟಕಗಳಾದ ಸಿಬಿಐ ಮತ್ತು ಇಡಿ ಬಳಸಿಕೊಂಡು ಪಕ್ಷದ ಮುಖಂಡರಾದ ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ, ವಿನಯ ಕುಲಕರ್ಣಿ ಸೇರಿದಂತೆ ಇತರ ನಾಯಕರನ್ನು ಹಣಿಯಲು ಯತ್ನಿಸುತ್ತಿದೆ’ ಎಂದೂ ದೂರಿದ್ದಾರೆ.