ಬಂಟ್ವಾಳ (22-10-2020): ಮಿನಿವಿಧಾನ ಸೌಧಕ್ಕೆ ನಾಗದೋಷ ಇದೆ ಎಂದು ಪೂಜೆ ಮಾಡಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.
ನಗರದ ಬಿಸಿ ರೋಡ್ನಲ್ಲಿರುವ 3ವರ್ಷಗಳ ಹಿಂದೆ ನಿರ್ಮಿಸಿದ ಹೊಸ ಕಟ್ಟಡಕ್ಕೆ ನಾಗದೋಷ ಇದೆ ಎಂದು ಪರಿಹಾರ ಪೂಜೆ ಮಾಡಲಾಗಿದೆ.
ಈ ಕಚೇರಿಗೆ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದರಂತೆ. ಕೆಲ ಅಧಿಕಾರಿಗಳು ಕಚೇರಿ ದೋಷದಿಂದ ಅಕಾಲಿಕ ಮರಣಕ್ಕೂ ತುತ್ತಾಗಿದ್ದಾರಂತೆ. ಕಳೆದ ಸಪ್ಟೆಂಬರ್ ತಿಂಗಳಲ್ಲಿ ತಾಲೂಕು ಕಚೇರಿಯ ಇಬ್ಬರು ಉಪತಹಶೀಲ್ದಾರ್ ಗಳು ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಹೃದಯಾಘಾತ ಮತ್ತು ಅಲ್ಪಕಾಲದ ಅನಾರೋಗ್ಯದಿಂದ ಶ್ರೀಧರ್ ಮತ್ತು ರಾಧಾಕೃಷ್ಣ ಎಂಬ ಉಪತಹಶೀಲ್ದಾರ್ ಗಳು ಮೃತಪಟ್ಟಿದ್ದಾರೆ. ಇದಕ್ಕೆ ನಾಗದೋಷ ಕಾರಣ ಎಂದು ಪರಿಹಾರ ಪೂಜೆ ಮಾಡಲಾಗಿದೆ.
ಜಿ.ಪಂ ಸದಸ್ಯ ತುಂಗಪ್ಪ ಬಂಗೇರಾ ಎಂಬವರು ವೆಂಕಟರಮಣ ಮುಚ್ಚಿನ್ನಾಯ ಎಂಬವರ ಮೂಲಕ ತಾಂಬೂಲ ಪ್ರಶ್ನೆ ನಡೆಸಿದ್ದರಂತೆ. ಈ ವೇಳೆ ಇಡೀ ಕಟ್ಟಡಕ್ಕೆ ನಾಗದೋಷವಿದ್ದು, ಪರಿಹಾರ ಕಾಣದೇ ಇದ್ದರೆ ಇನ್ನಿಬ್ಬರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂದು ಹೇಳಿದ್ದರಂತೆ,ಇದರಿಂದಾಗಿ ಉಡುಪಿಯ ಮನೋಹರ್ ತಂತ್ರಿ ನೇತೃತ್ವದಲ್ಲಿ ಮಿನಿ ವಿಧಾನಸೌಧದಲ್ಲಿ ಮೃತ್ಯುಂಜಯ ಹೋಮ ನಡೆಸಿದ್ದಾರೆ.