ಬೆಂಗಳೂರು (12-02-2020): ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಕಿಡ್ನಾಪ್ ಮಾಡಿ ದುಷ್ಕರ್ಮಿಗಳು ಚಿತ್ರಹಿಂಸೆ ನೀಡಿ 30ಕೋಟಿ ರೂ.ಗೆ ಬೇಡಿಕೆ ಇಟ್ಟಿರುವ ಬಗ್ಗೆ ಸ್ವತಃ ಅವರೇ ಹೇಳಿದ್ದಾರೆ.
ನ. 25ರಂದು ಸಂಜೆ ಕಾರಿನ ಗಾಜು ಒಡೆದು ನನಗೆ ಮಂಕಿ ಕ್ಯಾಪ್ ಹಾಕಿ ಕಿಡ್ನಾಪ್ ಮಾಡಿ ದುಷ್ಕರ್ಮಿಗಳು ಕಾಡಿಗೆ ಕರೆದೊಯ್ದಿದ್ದರು. ಅಲ್ಲಿ ಚಿತ್ರಹಿಂಸೆ ನೀಡಿ 30 ಕೋಟಿ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ನನ್ನ ಬಳಿ ಹಣವಿಲ್ಲ ಎಂದು ಹೇಳಿದಾಗ ಥಳಿಸಿದ್ದಾರೆ. ಕೊನೆಗೆ 50 ಲಕ್ಷ ರೂ. ಕೊಡುವಂತೆ ಸ್ನೇಹಿತನಿಗೆ ಕರೆ ಮಾಡಿ ತಿಳಿಸಿದ್ದೆ ಎಂದು ಹೇಳಿದ್ದಾರೆ.
ಕಾಡಿನಲ್ಲಿ ಚಿತ್ರಹಿಂಸೆ ನೀಡಿ ಬೇರೊಂದು ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದಾರೆ. ಎಲ್ಲಿಗೆ ಎಂಬುದು ನನಗೆ ಗೊತ್ತಾಗಿಲ್ಲ. ನನಗೆ ಕೈಕಾಲು ಕಟ್ಟಿಹಾಕಿ ಹೊಡೆದಿದ್ದಾರೆ. ಬೇರೆಯವರು ಕರೆ ಮಾಡಿದಾಗ ರಿಸೀವ್ ಮಾಡಿ ನಾರ್ಮಲ್ ಆಗಿ ಮಾತನಾಡುವಂತೆ ಬೆದರಿಸುತ್ತಿದ್ದರು.
ನನ್ನ ಡ್ರೈವರ್ಗೆ ಸಿಕ್ಕಾಪಟೆ ಹೊಡೆದಿದ್ದರಿಂದ ಅವನು ಪ್ರಜ್ಞೆ ತಪ್ಪಿದ. ಆತ ಸತ್ತೇ ಹೋಗಿದ್ದಾನೆ ಎಂದು ಭಾವಿಸಿದ ಗೂಂಡಾಗಳು ಕುಡಿಯಲು ಕುಳಿತರು. ಆಗ ರಾತ್ರಿ ಸುಮಾರು 11.30 ಆಗಿತ್ತು ಎಂದು ವರ್ತೂರು ಪ್ರಕಾಶ ಘಟನೆಯ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನನ್ನ ಮತ್ತು ಡ್ರೈವರ್ನನ್ನು ಬೇರೆಬೇರೆ ಸ್ಥಳದಲ್ಲಿ ಇಟ್ಟು ಹೊಡೆದಿದ್ದರು. ಅವನಿಗೆ ಎಚ್ಚರವಾದ ಬಳಿಕ ಯಾವುದೋ ಪೊದೆಯಲ್ಲಿ ತಪ್ಪಿಸಿಕೊಂಡ. ಇವರು ಹುಡುಕಿದರೂ ಸಿಗಲಿಲ್ಲ. ನನ್ನ ಮೊಬೈಲ್ ಆನ್ನಲ್ಲಿಯೇ ಇಟ್ಟಿದ್ದರು. ಸ್ನೇಹಿತ ಹಣ ತಂದು ಕೊಟ್ಟ. ನಂತರ ಗೂಂಡಾಗಳು ನನ್ನನ್ನು ಹೊಸಕೋಟೆ ಬಳಿ ಬಿಟ್ಟು ಹೋದರು. ನನ್ನ ಮುಖದ ಮೇಲೆ ಮಂಕಿ ಕ್ಯಾಪ್ ಹಾಗೇ ಇತ್ತು. ಬಳಿಕ ಅಲ್ಲಿ ನನ್ನ ಮಗನನ್ನು ಕರೆಸಿಕೊಂಡು, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದೆ. ನನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ.