ಹಾವೇರಿ:(13/10/2020): ‘ಬಿ.ಎಸ್. ಯಡಿಯೂರಪ್ಪ ಅವರು ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಮಾತು ಕೊಟ್ಟಿದ್ದರು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಮಾತು ಮರೆತುಬಿಟ್ಟಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ವಾಲ್ಮೀಕಿ ಸಮುದಾಯದ ಬೇಡಿಕೆ ಈಡೇರಿಸದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಜೈಲಿನಲ್ಲಿಟ್ಟರೂ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.
`ಮೀಸಲಾತಿ ನಿಮ್ಮಪ್ಪನ ಮನೆ ಆಸ್ತಿಯೇ ನಲ್ಲ. ನಾವು ನಿಮ್ಮಪ್ಪನ ಮನೆ ಆಸ್ತಿ ಕೇಳ್ತಿಲ್ಲ. ಮೀಸಲಾತಿ ನಮ್ಮ ಸಂವಿಧಾನಬದ್ಧ ಹಕ್ಕು. ಮೀಸಲಾತಿ ವಿಚಾರದಲ್ಲಿ ನಮ್ಮ ಕಿವಿಗೆ ಹೂವು ಇಡ್ತಿದ್ದಾರೆ. ಅಕ್ಟೋಬರ್ 21ರಂದು ಬೆಂಗಳೂರಿನಲ್ಲಿ ಧರಣಿ ಮಾಡುತ್ತೇನೆ. ಅ.31ರಂದು ಬೆಂಗಳೂರಿನಲ್ಲಿ ವಾಲ್ಮೀಕಿ ಜಯಂತಿ ನಡೆಯಲಿದೆ. ಸಮುದಾಯದವರು ಒಗ್ಗೂಡಿ ಅಂದು ‘ಬೆಂಗಳೂರು ಚಲೋ’ ಮಾಡೋಣ ಬನ್ನಿ ಎಂದು ಕರೆ ನೀಡಿದರು.