ವ್ಯಾಕ್ಸಿನ್ ಪಡೆಯಲು ಜನ ಕ್ಯೂನಲ್ಲಿದ್ದಾರೆ, ಮೊದಲು ಅವರಿಗೆ ಲಸಿಕೆ ಕೊಡಿ, ಆ ಮೇಲೆ ನಮ್ಮ ಕಡೆ ಬೊಟ್ಟು ಮಾಡಿ : ಮಾಜಿ ಸಿಎಂ ಸಿದ್ದರಾಮಯ್ಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಜನರು ಕೊರೊನಾ ವ್ಯಾಕ್ಸಿನ್ ಪಡೆಯಲು ಹಿಂಜರಿಯುತ್ತಿರುವುದಕ್ಕೆ ಕಾಂಗ್ರೆಸ್ ಅಪಪ್ರಚಾರ ಕಾರಣ ಎನ್ನುವ ಬಿಜೆಪಿ ಆರೋಪ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ನಡೆಸುತ್ತಿರುವ ಹತಾಶ ಪ್ರಯತ್ನ ಅಷ್ಟೆ. ವ್ಯಾಕ್ಸಿನ್ ಪಡೆಯಲು ಜನ ಕ್ಯೂನಲ್ಲಿದ್ದಾರೆ, ಮೊದಲು ಅವರಿಗೆ ಕೊಡಿ, ಆ ಮೇಲೆ ನಮ್ಮ ಕಡೆ ಬೊಟ್ಟು ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ವ್ಯಾಕ್ಸಿನನ್ನು ಎಲ್ಲರಿಗೂ ಉಚಿತವಾಗಿ ಹಂಚಿ ಎನ್ನುವುದೇ ನಮ್ಮ ಮೂಲ ಬೇಡಿಕೆ. ನಾವು ವ್ಯಾಕ್ಸಿನನ್ನು ಎಂದೂ ವಿರೋಧಿಸಿಲ್ಲ, ಅದರ ಸತ್ವಪರೀಕ್ಷೆಯ ಫಲಿತಾಂಶಕ್ಕಿಂತ ಮೊದಲು ಕೇವಲ ಪ್ರಚಾರಕ್ಕಾಗಿ ಬಳಕೆಗೆ ಬಿಡುಗಡೆ ಮಾಡಬಾರದೆಂಬ ತಜ್ಞರ ಅಭಿಪ್ರಾಯಕ್ಕೆ ನಮ್ಮ ಪಕ್ಷ ಸಹಮತ ವ್ಯಕ್ತಪಡಿಸಿತ್ತು.

ಕೊರೊನಾ ವ್ಯಾಕ್ಸಿನನ್ನು ಕೊರೊನಾ ವಾರಿಯರ್ಸ್ ಗಾಗಿ ಬಿಡುಗಡೆಗೊಳಿಸಿದ್ದು ಜನವರಿ 18ರಂದು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವರು ವ್ಯಾಕ್ಸಿನ್ ಪಡೆಯುವ ಧೈರ್ಯ ತೋರಿಸಿದ್ದು ಮಾರ್ಚ್ ಒಂದರಂದು. ಎಲ್ಲದರಲ್ಲಿಯೂ ನಾವೇ ಮೊದಲು ಎಂದು ಎದೆ ತಟ್ಟಿಕೊಳ್ಳುವ ಪ್ರಧಾನಿ ಮೋದಿ ಅವರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂಜರಿದದ್ದು ಯಾಕೆ? ಬೇರೆಲ್ಲ ದೇಶಗಳ ಪ್ರಧಾನಿ/ಅಧ್ಯಕ್ಷರು ಕೊರೊನಾ ವಾರಿಯರ್ಸ್ ರಂತೆ ಮೊದಲು ವ್ಯಾಕ್ಸಿನ್ ಹಾಕಿಸಿಕೊಂಡು ಜನರಿಗೆ ಧೈರ್ಯ ತುಂಬಿದ್ದರೆ ನಮ್ಮ ಪ್ರಧಾನಿ ಮೋದಿ ಅವರು ಮಾತ್ರ ಫಲಿತಾಂಶ ಕಾದು ನೋಡಿ ವ್ಯಾಕ್ಸಿನ್ ಹಾಕಿಸಿಕೊಂಡರು. 56 ಇಂಚಿನ ಎದೆಯ ಧೈರ್ಯ ಎಂದರೆ ಇದೇನಾ? ಎಂದು ಗುಡುಗಿದ್ದಾರೆ.

ಭಾರತದಲ್ಲಿ ಎರಡೂ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡವರು ನಾಲ್ಕುಕೋಟಿ ಜನಮಾತ್ರ (3%), ಕರ್ನಾಟಕದಲ್ಲಿ ಕೇವಲ 25 ಲಕ್ಷ ಜನ. ಇದಕ್ಕೆ ವ್ಯಾಕ್ಸಿನ್ ಕೊರತೆಯೇ ಕಾರಣ ಹೊರತು ಜನರ ಹಿಂಜರಿಕೆ ಅಲ್ಲ. ಜನರ ಬೇಡಿಕೆಗೆ ತಕ್ಕಂತೆ ವ್ಯಾಕ್ಸಿನ್ ಪೂರೈಸಲಾಗದ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗ ವಿರೋಧ ಪಕ್ಷಗಳನ್ನು ಹಳಿಯುವುದು ತಮಾಷೆಯಾಗಿದೆ.
ಮೊದಲು ಕೊರೊನಾ ಕಾಣಿಸಿಕೊಂಡಾಗ ತಟ್ಟೆ ಬಡಿಯಿರಿ, ದೀಪ ಹಚ್ಚಿರಿ ಎಂದು ಪ್ರಧಾನಿಯವರು ಕರೆ ನೀಡಿದಾಗ ಇಡೀ ದೇಶ ಕುಣಿದಾಡಿತ್ತು. ಆದರೆ ವ್ಯಾಕ್ಸಿನ್ ವಿಷಯದಲ್ಲಿ ಮಾತ್ರ ಜನ ಕಾಂಗ್ರೆಸ್ ಮಾತಿಗೆ ತಲೆದೂಗಿದ್ದಾರೆ ಎಂದರೆ ದೇಶದ ಜನ ಈಗ ನರೇಂದ್ರ ಮೋದಿ ಅವರ ಮಾತಿಗೆ ಕಿವಿಗೊಡೊಲ್ಲ, ಕಾಂಗ್ರೆಸ್ ಮಾತಿಗೆ ಬೆಲೆಕೊಡುತ್ತಾರೆ ಎಂದರ್ಥವೇ? ಎಂದು ಪ್ರಶ್ನಿಸಿದ್ದಾರೆ.

ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿರುವುದಕ್ಕೆ ಕಾಂಗ್ರೆಸ್ ಅಪಪ್ರಚಾರ ಕಾರಣ ಎಂದು ಆರೋಪಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ ತಮಗೆ ತಾವೇ ಗೋಲು ಹೊಡೆದುಕೊಂಡಿದ್ದಾರೆ. ಕಾಂಗ್ರೆಸ್ ಪ್ರಚಾರ ನಂಬಿ ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮಾರ್ಚ್ 23ರ ವರೆಗೆ ಕಾದು ಕೂತಿದ್ದೇ? ಸರ್ವರಿಗೂ ಉಚಿತ ವ್ಯಾಕ್ಸಿನ್ ಹಾಕುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಜೊತೆಗೂಡಿ ದೇವೇಗೌಡ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು. ಕುಮಾರಸ್ವಾಮಿಯವರು ಇಂತಹ ಬಾಲಿಷ ಹೇಳಿಕೆ ನೀಡುವ ಮೊದಲು ತಂದೆಯ ಸಲಹೆ‌ ಪಡೆಯುವುದು ಒಳ್ಳೆಯದು ಎಂದು ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು