ವಾಷಿಂಗ್ಟನ್, ಡಿಸಿ(4-11-2020): ಅಮೇರಿಕಾ ಚುನಾವಣೆಯಲ್ಲಿ ಬೈಡನ್ ಮತ್ತು ಟ್ರಂಪ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಬೈಡನ್ 213 ಮತ್ತು ಟ್ರಂಪ್ 118 ಇಲೆಕ್ಟ್ರಲ್ ಮತಗಳನ್ನು ಪಡೆದುಕೊಂಡಿದ್ದಾರೆ.
ಹೊರ ನೋಟಕ್ಕೆ ಟ್ರಂಪ್ ಸೋಲಿನತ್ತ ಸಾಗುವ ಲಕ್ಷಣಗಳು ಕಂಡು ಬಂದರೂ ಕೆಲವು ನಿರ್ಣಾಯಕ ಕ್ಷೇತ್ರಗಳಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆನ್ನಲಾಗಿದೆ. ವಿಶೇಷವಾಗಿ ಫ್ಲೋರಿಡಾ, ಇಂಡಿಯಾನಾ ಮೊದಲಾದ ನಿರ್ಣಾಯಕ ಸ್ಥಳಗಳಲ್ಲಿ ಟ್ರಂಪ್ ಕೈ ಹಿಡಿಯುವ ಸಾದ್ಯತೆಯಿದೆ. ವರ್ಜೀನಿಯಾ ಮತ್ತು ವ್ಯೊಮೋಂಗಿನಲ್ಲಿ ಬೈಡನ್ ವಿಜಯ ಸಾಧಿಸಿದ್ದಾರೆ. ಇಲೆಕ್ಟ್ರಲ್ ಮತಗಳು ಬೈಡನ್ ಪರವಾಗಿದ್ದರೆ, ಜನತಾ ಮತಗಳು ಟ್ರಂಪ್ ಪರವಿದೆ. ಹಾಗಿದ್ದೂ ಬೈಡನಿಗೆ ಶ್ವೇತಭವನದ ದಾರಿ ಸುಗಮವಾಗಿರುವುದೆಂದು ಚುನಾವಣಾ ತಜ್ಞರ ಅನಿಸಿಕೆ. ಸಮೀಕ್ಷೆಗಳೂ ಬೈಡನ್ ಪರವಾಗಿ ಬಂದಿದ್ದವು.
ಇಬ್ಬರೂ ಸ್ಪರ್ಧಿಗಳು ತುಂಬು ಆತ್ಮವಿಶ್ವಾಸದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ತಾನು ಶ್ವೇತ ಭವನದ ಕಡೆಗೆ ಸಾಗುವುದಾಗಿ ಬೈಡನ್ ಹೇಳಿದರೆ, ತನ್ನ ಜಯ ನಿಶ್ಚಿತವೆಂದು ಟ್ರಂಪ್ ನುಡಿ. ಜನರು ಕೊರೋನಾ ಮುಂಜಾಗ್ರತಾ ಕ್ರಮಗಳಾದ ಮಾಸ್ಕ್, ದೈಹಿಕ ಅಂತರಗಳನ್ನು ಪಾಲಿಸಿ, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲೆಡೆಯೂ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಭಾರತೀಯ ಕಾಲಮಾನ 4:30ಕ್ಕೆ ಪೋಲಿಂಗ್ ಆರಂಭವಾಗಿತ್ತು. ಅಂಚೆ ಮತಗಳ ಎಣಿಕೆಯು ಚುನಾವಣಾ ಪ್ರಕ್ರಿಯೆಯನ್ನು ತುಸು ವಿಳಂಬ ಗೊಳಿಸಿದೆ. ಮಧ್ಯಾಹ್ನ ಕಳೆಯುವುದರೊಂದಿಗೆ ಸ್ಪಷ್ಟ ಫಲಿತಾಂಶ ಸಿಗಲಿದೆಯೆಂದು ನಿರೀಕ್ಷಿಸಲಾಗಿದೆ.