ಉತ್ತರಪ್ರದೇಶ(18-02-2021): ಉತ್ತರ ಪ್ರದೇಶದ ಉನ್ನಾವೊದಲ್ಲಿ ಹೊಲವೊಂದರಲ್ಲಿ ಇಬ್ಬರು ದಲಿತ ಬಾಲಕಿಯರು ಶವವಾಗಿ ಪತ್ತೆಯಾಗಿದ್ದು, ಮತ್ತೋರ್ವಳು ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
16, 13 ಮತ್ತು 17 ವರ್ಷ ವಯಸ್ಸಿನ ಬಾಲಕಿಯರು ಪ್ರಾಣಿಗಳಿಗೆ ಮೇವು ತರಲು ಬುಧವಾರ ಮಧ್ಯಾಹ್ನ ಮನೆಯಿಂದ ಹೊರಟಿದ್ದರು. ಸಂಜೆ ತಡವಾದರೂ ಅವರು ಮನೆಗೆ ಹಿಂತಿರುಗದಿದ್ದಾಗ, ಕುಟುಂಬವು ಹುಡುಕಾಟವನ್ನು ಪ್ರಾರಂಭಿಸಿದೆ. ಈ ವೇಳೆ ಬಾಲಕಿಯರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ.
ಬಾಲಕಿಯರನ್ನು ಮೈದಾನದಲ್ಲಿ ಬಟ್ಟೆಗಳಿಂದ ಕಟ್ಟಿಹಾಕಲಾಗಿದೆ ಎಂದು ಕುಟುಂಬ ಆರೋಪಿಸಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಈ ವೇಳೆ ಇಬ್ಬರು ಮೃತಪಟ್ಟಿದ್ದಾರೆ. ಇನ್ನೋರ್ವಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿದ್ದಾಳೆ.
ಇಬ್ಬರು ಬಾಲಕಿಯರ ಶವಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಹೇಳುವ ಪ್ರಕಾರ, ವಿಷದ ಲಕ್ಷಣಗಳು ಕಂಡುಬರುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಏನಾಯಿತು ಎಂದು ತನಿಖೆ ನಡೆಸಲು ಆರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸ್ಥಳಕ್ಕೆ ಶ್ವಾನ ದಳವನ್ನೂ ಕರೆಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಆನಂದ್ ಕುಲಕರ್ಣಿ ಅವರು ಹೇಳಿದ್ದಾರೆ.