ಮುಂಬೈ(13/10/2020): ‘ನೀವು ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದೀರಿ. ಜಾತ್ಯತೀತತೆಯು ಸಂವಿಧಾನದ ಅಂಗ’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಅಲ್ಲಿಯ ರಾಜ್ಯಪಾಲರಿಗೆ ಪಾಠ ಮಾಡಿರುವ ಘಟನೆ ನಡೆದಿದೆ.
ದೇವಸ್ಥಾನಗಳ ಪುನರಾರಂಭಕ್ಕೆ ಅವಕಾಶ ಮಾಡಿಕೊಡಬೇಕೆಂದು ಅನೇಕ ಧಾರ್ಮಿಕ ಸಂಘಟನೆಗಳು ಕಳೆದ ಕೆಲವು ತಿಂಗಳುಗಳಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದು, ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರ ಅದಕ್ಕೆ ಅವಕಾಶ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರವಾಗಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿರುವ ರಾಜ್ಯಪಾಲರು, ‘ನೀವು ಹಿಂದುತ್ವದ ಪ್ರತಿಪಾದಕರಾಗಿದ್ದೀರಿ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಯೋಧ್ಯೆಗೆ ಭೇಟಿ ನೀಡುವ ಮೂಲಕ ಭಗವಾನ್ ರಾಮನ ಕುರಿತಾದ ನಿಮ್ಮ ಭಕ್ತಿಯನ್ನು ಸಾರ್ವಜನಿಕವಾಗಿ ತಿಳಿಯಪಡಿಸಿದ್ದೀರಿ. ಆಷಾಢ ಏಕಾದಶಿಯಂದು ಫಂಡರಾಪುರದ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೀರಿ’ ಎಂದು ಉಲ್ಲೇಖಿಸಿದ್ದಾರೆ.
ಮುಂದುವರಿದು, ‘ಪೂಜಾ ಸ್ಥಳಗಳನೆ ಪುನರಾರಂಭ ಮುಂದೂಡಲು ನೀವು ಯಾವುದಾದರೂ ದೈವೀಕ ಮುನ್ಸೂಚನೆಯನ್ನು ಪಡೆಯುತ್ತಿದ್ದೀರಾ ಅಥವಾ ದಿಢೀರಾಗಿ, ಹಿಂದೆ ನೀವು ದ್ವೇಷಿಸುತ್ತಿದ್ದ ಜಾತ್ಯತೀತರಾದಿರಾ ಎಂಬುದಾಗಿ ಅಚ್ಚರಿಯಾಗಿದೆ’ ಎಂದು ಬರೆದಿದ್ದಾರೆ.