ಅಬುಧಾಬಿ(7-11-2020): ಯುಎಇಯಲ್ಲಿ ಇಸ್ಲಾಮೀ ಕಾನೂನುಗಳನ್ನು ಮತ್ತು ಇತರ ರಾಷ್ಟ್ರೀಯ ಕಾನೂನುಗಳನ್ನು ಸಡಿಲಗೊಳಿಸಿ, ಭಾರೀ ಬದಲಾವಣೆ ತರಲಾಗಿದೆ. ಯುಎಇ ಅಧ್ಯಕ್ಷ ಶೈಖ್ ಖಲೀಫಾ ಈ ಬಗೆಗಿನ ಹತ್ತು ಹಲವು ಕಾನೂನು ಬದಲಾವಣೆಯ ಘೋಷಣೆಗಳನ್ನು ಮಾಡಿದ್ದಾರೆ.
ಇನ್ನು ಮುಂದೆ ವಯಸ್ಕರು ಪರಸ್ಪರ ಒಪ್ಪಿಗೆಯೊಂದಿಗೆ ಮಾಡಲಾಗುವ ಲೈಂಗಿಕ ಸಂಪರ್ಕವನ್ನು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಬಲಾತ್ಕಾರ, ಭಯಪಡಿಸಿ, ಒತ್ತಡ ಹೇರಿ ಲೈಂಗಿಕ ಸಂಪರ್ಕ ಸಾಧಿಸುವುದು, ಹದಿಹರೆಯವರೊಂದಿಗೆ ಮತ್ತು ಮಾನಸಿಕ ರೋಗಿಗಳ ಜೊತೆಗಿನ ಲೈಂಗಿಕ ಸಂಪರ್ಕ ಇವೆಲ್ಲವೂ ಶಿಕ್ಷಾರ್ಹ ಅಪರಾಧವಾಗಿದೆ.
ವಿದೇಶೀಯರು ವಿವಾಹ, ಆಸ್ತಿ ಹಂಚಿಕೆ ಮೊದಲಾದವುಗಳನ್ನು ಅವರವರ ದೇಶದ ಕಾನೂನಿನ ಪ್ರಕಾರ ನಿರ್ವಹಿಸಬಹುದಾಗಿದೆ. ಇಪ್ಪತ್ತೊಂದು ವರ್ಷ ವಯಸ್ಸಿಗೆ ಮೇಲ್ಪಟ್ಟವರು ಮದ್ಯಪಾನ ಮಾಡಬಹುದಾಗಿದೆ. ಆದರೆ ಎಲ್ಲಾ ಸ್ಥಳಗಳಲ್ಲಿ ಅಲ್ಲ, ಅದಕ್ಕೆಂದೇ ಮೀಸಲಿರಿಸಿದ ಸ್ಥಳಗಳಲ್ಲಿ ಮಾತ್ರವೇ ಅವಕಾಶ.
ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯತೆ ಉಲ್ಲಂಘಿಸಿದವರು, ದಂಡ ಕಟ್ಟಿ ಪಾರಾಗಬಹುದಾಗಿದೆ. ಆತ್ಮಹತ್ಯೆಗೆ ಪ್ರೇರೇಪಿಸುವುದನ್ನು ಅಪರಾಧವಾಗಿ ಪರಿಗಣಿಸಿದರೆ, ಆತ್ಮಹತ್ಯೆಗೆ ಶ್ರಮಿಸಿದವರಿಗೆ ಜೈಲು ಶಿಕ್ಷೆಯ ಬದಲು ಮಾನಸಿಕ ಚಿಕಿತ್ಸೆ ಕೊಡಲಾಗುವುದು. ಆತ್ಮಗೌರವಕ್ಕಾಗಿ ಮಾಡುವ ಕೊಲೆಗಳಿಗೆ ಇತರ ಕೊಲೆಗಳಿಗೆ ನೀಡುವ ಶಿಕ್ಷೆಯನ್ನೇ ನೀಡಲಾಗುವುದು. ಇದಕ್ಕೆ ಯಾವುದೇ ರಿಯಾಯಿತಿ ಇರುವುದಿಲ್ಲ.