ಯುಎಇ(10/10/2020): ಕೊಲ್ಲಿ ದೇಶಗಳ ಪ್ರಮುಖ ಹಣ ವಿನಿಮಯ ಸಂಸ್ಥೆಯನ್ನು ಇಸ್ರೇಲ್ ಕೇಂದ್ರೀಕೃತವಾಗಿ ಕಾರ್ಯಾಚರಿಸುವ ಕಂಪೆನಿಯು ಖರೀದಿಸಲಿದೆ. ಯುಎಇ ಎಕ್ಸ್ಚೇಂಜ್, ಯುನಿ ಮನಿ ಮುಂತಾದ ಸಂಸ್ಥೆಗಳನ್ನೊಳಗೊಂಡ ಫನಾಬ್ಲರ್ ಎಂಬ ಕಂಪೆನಿಯನ್ನು ಇಸ್ರೇಲ್ ಕಂಪೆನಿಯಾದ ಪ್ರಿಸಮ್ ಅಡ್ವಾನ್ಸ್ ಸೆಲ್ಯೂಷನ್ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಸಿದ್ಧವಾಗಿದೆ.
ಇದರಿಂದಾಗಿ ಹಣಕಾಸಿನ ಮುಗ್ಗಟ್ಟಿನಿಂದಾಗಿ ಐದು ತಿಂಗಳ ಮೊದಲು ಮುಚ್ಚಿಹೋಗಿರುವ ಯುಎಇ ಎಕ್ಸ್ಚೇಂಜ್ ಪುನರ್ಜನ್ಮ ಪಡೆಯಲಿದೆಯೆಂದು ನಿರೀಕ್ಷಿಸಲಾಗಿದೆ. ಎಕ್ಸ್ಪ್ರೆಸ್ ಮನಿ, ರೆಮಿಟೋ ಇಂಡಿಯಾ, ಬಯಾನ್ ಪೇ ಇತ್ಯಾದಿಗಳೂ ಕೂಡಾ ಫಿನಾಬ್ಲರಿನ ಅಧೀನದಲ್ಲೇ ಕಾರ್ಯಾಚರಿಸುತ್ತಿದೆ. ಇದರ ಸ್ಥಾಪಕನಾಗಿದ್ದ ಬಿ.ಆರ್.ಶೆಟ್ಟಿಯನ್ನು ಕಂಪೆನಿಯ ಉನ್ನತ ಸ್ಥಾನದಿಂದ ಉಚ್ಛಾಟಿಸಲಾಗಿತ್ತು. ಬಳಿಕ ಶೆಟ್ಟಿಯ ಮಾಲೀಕತ್ವದಲ್ಲಿದ್ದ ಎನ್ಎಮ್ಸಿ ಯಿಂದ ಪತ್ನಿಯನ್ನೂ ಉಚ್ಛಾಟಿಸಲಾಗಿತ್ತು. ಸದ್ಯ ಇಬ್ಬರೂ ಭಾರತದಲ್ಲಿ ನೆಲೆಸಿದ್ದಾರೆ.
ಯುಎಇ ಎಕ್ಸ್ಚೇಂಜ್ ತನ್ನ ಕಾರ್ಯಾಚರಣೆ ನಿಲ್ಲಿಸಿದ್ದರೂ ಕೂಡಾ ಗ್ರಾಹಕರಿಗೆ ಪಾವತಿಸಲು ಬಾಕಿಯಿದ್ದ ಹಣವನ್ನು ಕಳೆದ ತಿಂಗಳಲ್ಲೇ ಸಂಪೂರ್ಣ ಪಾವತಿ ಮಾಡಲಾಗಿತ್ತು.
ಪ್ರಸ್ತುತ ಯುಎಇ ಎಕ್ಸ್ಚೇಂಜ್, ಯುಎಇ ಸೆಂಟ್ರಲ್ ಬ್ಯಾಂಕಿನ ನಿಯಂತ್ರಣದಲ್ಲಿದೆ.