ಬೆಂಗಳೂರು(18-12-2020): ಕರ್ನಾಟಕ ರಕ್ಷಣಾ ವೇದಿಕೆ ಕರೆ ಕೊಟ್ಟಿರುವ “ಕನ್ನಡ ವಿವಿ ಉಳಿಸಿ” ಹ್ಯಾಶ್ ಟ್ಯಾಗ್ ಟ್ವಿಟರಿನಲ್ಲಿ ಟ್ರೆಂಡಿಂಗ್ ಆಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಬೆಂಬಲಿಸಿ ಟ್ವಿಟರ್ ಅಭಿಯಾನಕ್ಕೆ ಕರೆ ನೀಡಲಾಗಿತ್ತು.
ಹಂಪಿ ವಿಶ್ವವಿದ್ಯಾಲಯಕ್ಕೆ ಒಂದು ವರ್ಷದಿಂದ ಅನುದಾನ ಒದಗಿಸದಿರುವ ಸರಕಾರದ ವಿರುದ್ಧ ಟ್ವಿಟರಿನಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸುಮಾರು ಎರಡು ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಬೋಧನೆ ಮತ್ತು ಸಂಶೋಧನೆಗಳು ನಿಂತು ಹೋಗಿದೆ. ದೂರ ಶಿಕ್ಷಣ ಕೋರ್ಸುಗಳು ನಿಲ್ಲುವ ಹಂತಕ್ಕೆ ಬಂದಿದೆ. ಎ+ ಇದ್ದದ್ದು ಬಿ ಶ್ರೇಣಿಗೆ ಇಳಿದಿದೆ ಇತ್ಯಾದಿ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗಿದೆ.
ಕನ್ನಡಿಗರು ಧರ್ಮದ ಅಮಲಿನಲ್ಲಿದ್ದಾರೆ. ಇದರಿಂದಾಗಿ ಕನ್ನಡ ಭಾಷೆಯ ಸಮಸ್ಯೆಯು ಗೌಣವಾಗುತ್ತಿದೆ. ಸ್ವತಃ ಕನ್ನಡ ನಾಡಿನಲ್ಲೇ ಕನ್ನಡ ವಿಶ್ವವಿದ್ಯಾಲಯದ ಅಸ್ತಿತ್ವಕ್ಕೆ ಕುತ್ತು ಬರುತ್ತಿದೆ. ಇಂದು ಕನ್ನಡ ವಿವಿಗೆ ಬಂದ ಗತಿಯೇ ನಾಳೆ ಕನ್ನಡಿಗರಿಗೂ ಬರಲಿದೆ ಎಂಬ ಎಚ್ಚರಿಕೆಯ ಬರಹಗಳೂ ಕಂಡು ಬಂದವು.
ಜಾತಿಗೊಂದರಂತೆ ನಿಗಮ ಮಂಡಳಿ, ಪ್ರಾಧಿಕಾರಗಳನ್ನು ರಚಿಸಿ, ಕೂಡಲೇ ಬಿಡುಗಡೆ ಮಾಡಲು ದುಡ್ಡಿದೆ. ಕನ್ನಡ ವಿವಿ ಉಳಿಸಿಕೊಳ್ಳಲು ಸರಕಾರದ ಬಳಿ ದುಡ್ಡಿಲ್ಲವೇ ? ಎಂದು ಶೃತಿ ಎಚ್ ಎಮ್ ಪ್ರಶ್ನಿಸುತ್ತಾರೆ.
ಮಾನ್ಯ ಮುಖ್ಯಮಂತ್ರಿಗಳೇ.. ನಿಮಗೆ ಕೂಡ ಸ್ವಲ್ಪ ಸ್ವಲ್ಪ ಊಟ ಕೊಟ್ಟರೆ ನಿಮಗೆ ಹೇಗೆ ಆಗುತ್ತದೆ? ಹಾಗೆಯೇ ಅಲ್ಲಿದ್ದ ಸಿಬ್ಬಂದಿಗಳಿಗೆ ಆಗುವುದಿಲ್ಲವೆ?? ಹಿಂದಿ ವಿವಿ, ಸಂಸ್ಕೃತ ವಿವಿಗೆ ನೂರಾರು ಕೋಟಿ ಚೆಲ್ಲುವ ನೀವು ಕನ್ನಡದ ವಿಷಯಕ್ಕೆ ಬಂದರೆ ಕೊಡುವ ಮನಸ್ಸೇ ಮಾಡಲ್ಲ..
ಇಷ್ಟು ದುಷ್ಟತನ ಒಳ್ಳೆಯದಲ್ಲ ಎಂಬುದು ಮಂಜುನಾಥ್ ಎಂಬವರ ಆಕ್ರೋಶದ ಟ್ವೀಟ್.
ಕನ್ನಡ ವಿವಿ ಉಳಿಸಿ ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲ ಕನ್ನಡಿಗರಿಗೆ ಕೃತಜ್ಞತೆ ಸಲ್ಲಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು, ನಾಳೆ ಕರವೇ ನಿಯೋಗದೊಂದಿಗೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇನೆ. ಸರ್ಕಾರ ಕನ್ನಡ ವಿವಿಗೆ ಅಗತ್ಯ ಅನುದಾನ ನೀಡದಿದ್ದರೆ ಬೀದಿಹೋರಾಟ ಅನಿವಾರ್ಯ ಎಂದಿದ್ದಾರೆ.