ಅಂಕಾರ(24-10-2020): ಮುಸ್ಲಿಮರ ಬಗೆಗೆ ಫ್ರಾನ್ಸ ಅಧ್ಯಕ್ಷ ಇಮ್ಯಾನುವಲ್ ಮಾಕ್ರೋನ್ ಹೊಂದಿರುವ ಧೋರಣೆಯನ್ನು ತುರ್ಕಿ ಮತ್ತೆ ಟೀಕಿಸಿದೆ. ಈ ಬಾರಿ ಮಾಕ್ರೋನಿನ ವಿರುದ್ಧ ತುರ್ಕಿ ಅಧ್ಯಕ್ಷ ರಜಬ್ ತ್ವಯ್ಯಿಬ್ ಉರ್ದುಗಾನ್ ಕಟು ಶಬ್ಧಗಳನ್ನು ಬಳಸಿದ್ದಾರೆ.
“ಇನ್ನೊಂದು ಧರ್ಮವನ್ನು ಪಾಲಿಸುವ ಕೋಟ್ಯಂತರ ಜನಸಂಖ್ಯೆಯಿರುವ ಸಮುದಾಯದ ಜೊತೆಗೆ ಈ ರೀತಿ ವರ್ತಿಸುವ ಒಬ್ಬ ರಾಜಕೀಯ ನೇತಾರನ ಕುರಿತು ಏನನ್ನೋಣ? ಮೊದಲು ಹೋಗಿ ಮಾನಸಿಕ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಲಿ ಎನ್ನುವುದರ ಹೊರತಾಗಿ ಇನ್ನೇನು ಹೇಳೋಣ?” ಎಂದು ಉರ್ದುಗಾನ್ ಪ್ರಶ್ನಿಸಿದ್ದಾರೆ. ದೇಶದ ಜಾತ್ಯತೀತ ಮೌಲ್ಯವನ್ನು ಕಾಪಾಡುವ ನೆಪದಲ್ಲಿ ಮುಸ್ಲಿಮರ ಬಗೆಗೆ ಫ್ರಾನ್ಸ್ ಸರಕಾರದ ನಡೆಯು ತುರ್ಕಿಯ ಅಸಮಾಧಾನಕ್ಕೆ ಕಾರಣವಾಗಿದೆ.
ಫ್ರಾನ್ಸಿನ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸರಕಾರಿ ಕಛೇರಿಗಳಲ್ಲಿ ಹಿಜಾಬ್ ನಿಷೇಧವಿದೆ. ಮಸೀದಿಗಳಿಗೆ ಬರುವ ವಿದೇಶಿ ನೆರವನ್ನು ಕೂಡಾ ನಿಲ್ಲಿಸಲು ಫ್ರಾನ್ಸ್ ಮುಂದಡಿಯಟ್ಟಿದೆ. ಇಸ್ಲಾಂ ಜಗತ್ತಿನಾದ್ಯಂತ ಸಂದಿಗ್ಧತೆಯನ್ನು ಎದುರಿಸುತ್ತಿರುವ ಧರ್ಮವಾಗಿದೆ ಎಂದು ಈ ತಿಂಗಳು ಮಾಕ್ರೋನ್ ಹೇಳಿದ್ದರು. ಇದರ ವಿರುದ್ಧ ವಿಶ್ವಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.