ವಾಷಿಂಗ್ಟನ್(06-11-2020): ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಮುಂದುವರಿದಿದೆ. ಈ ಮಧ್ಯೆ ಸೋಲಿನ ಭೀತಿಯಲ್ಲಿ ಮಿಚಿಗನ್ ನಲ್ಲಿ ಮತಗಳ ಕೌಂಟಿಂಗ್ ನಿಲ್ಲಿಸಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಅವರ ಅರ್ಜಿ ವಜಾಗೊಂಡಿದೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ಗೆಲುವಿನತ್ತ ಸಾಗುತ್ತಿದ್ದಾರೆ. ಈ ನಡುವೆ ಮಿಚಿಗನ್ ನಲ್ಲಿ ಮತ ಎಣಿಕೆ ನಿಲ್ಲಿಸಬೇಕೆಂದು ಮಿಚಿಗನ್ ಕೋರ್ಟ್ ಆಫ್ ಕ್ಲೈಮ್ಸ್ ಗೆ ಅರ್ಜಿ ಸಲ್ಲಿಸಿದ್ದರು. ಟ್ರಂಪ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.
ಮತ ಎಣಿಕೆಯನ್ನು ನಿಲ್ಲಿಸಬೇಕೆಂಬ ಡೊನಾಲ್ಡ್ ಟ್ರಂಪ್ ಅವರ ಮನವಿಗಳನ್ನು ತಿರಸ್ಕರಿಸುವುದಾಗಿ ಮಿಚಿಗನ್ ಕೋರ್ಟ್ ಆಫ್ ಕ್ಲೈಮ್ಸ್ನ ನ್ಯಾಯಾಧೀಶರಾದ ಸಿಂಥಿಯಾ ಸ್ಟೇಫೆನ್ಸ್ ಮತ್ತು ಜಾರ್ಜಿಯಾ ಕೋರ್ಟ್ ನ್ಯಾಯಮೂರ್ತಿ ಜೇಮ್ಸ್ ಎಫ್ ಬಾಸ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ಗೆಲುವಿನ ನಿರೀಕ್ಷೆ ಕಮರಿ ಹೋಗುತ್ತಿದ್ದಂತೆ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರೀ ವಂಚನೆ ಮತ್ತು ಮೋಸ ನಡೆದಿದೆ. ಈ ಅಕ್ರಮಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿ ಕೆಲವು ರಾಜ್ಯಗಳಲ್ಲಿ ದಾವೆಗಳನ್ನು ಹೂಡಿದ್ದರು.