ಕೊಚ್ಚಿ(07-10-2020): ಸಿನೆಮಾ ಚಿತ್ರೀಕರಣದ ವೇಳೆ ಮಲಯಾಳಂ ಚಿತ್ರರಂಗದ ಖ್ಯಾತ ನಟರೊಬ್ಬರು ತೀವ್ರ ಗಾಯಗೊಂಡು ಕೊಚ್ಚಿ ಆಸ್ಪತ್ರೆಯ ತೀವ್ರ ನಿಗಾ ಘಟಕ(icu)ಕ್ಕೆ ದಾಖಲಾಗಿರುವ ಘಟನೆ ನಡೆದಿದೆ.
ಎರ್ನಾಕುಲದಲ್ಲಿ ನಿರ್ದೇಶಕ ವಿ.ಎಸ್.ರೋಹಿತ್ ನಿರ್ದೇಶನದ ಕಳಾ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಖ್ಯಾತ ನಟ ಟೊವಿನೋ ಥಾಮಸ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಚಿತ್ರದ ಸ್ಟಂಟ್ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ತಾತ್ಕಾಲಿಕವಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.
ಫೈಟಿಂಗ್ ದೃಶ್ಯದ ಚಿತ್ರೀಕರಣದ ವೇಳೆ ನಟ ಟೊವಿನೋ ಥಾಮಸ್ ರ ಹೊಟ್ಟೆಯ ಭಾಗಕ್ಕೆ ಪೆಟ್ಟಾಗಿತ್ತು. ಆದರೆ, ನಟ ಇದನ್ನು ನಿರ್ಲಕ್ಷಿಸಿ ಚಿತ್ರೀಕರಣವನ್ನು ಮುಂದುವರಿಸಿದ್ದರು ಎನ್ನಲಾಗಿದೆ.
ಇಂದು ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ತಕ್ಷಣವೇ ಪರಿಶೀಲಿಸಿದ ವೈದ್ಯರು ನಟನ ಹೊಟ್ಟೆಯ ಭಾಗಕ್ಕೆ ಹೊಡೆತ ಬಿದ್ದು ಆಂತರಿಕ ರಕ್ತಸ್ರಾವವಾಗಿದೆ ಎಂದಿದ್ದಾರೆ. ಸದ್ಯ ನಟನನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿಕೊಂಡಿರುವ ವೈದ್ಯರು, 24 ಗಂಟೆಗಳ ನಿಗಾದಲ್ಲಿರಿಸಿದ್ದಾರೆ.