ಕನ್ನಡ ನಾಡಿನ ಅಭಿಮಾನ ಮೈಸೂರು ಹುಲಿ ಹುತಾತ್ಮ ಟಿಪ್ಪು ಸುಲ್ತಾನರ ಇತಿಹಾಸಕ್ಕೆ ಸಂಬಂಧಿಸಿದಂತೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳಿದಿರುವ ಕೆಲವೇ ಕೆಲವು ಜೀವಂತ ಕುರುಹುಗಳಲ್ಲಿ “ಟಿಪ್ಪು ಸುಲ್ತಾನರ ಫಿರಂಗಿ” ಯೂ ಒಂದು.. ಇತಿಹಾಸ ತಿರುಚುವ ಪ್ರತಿಗಾಮಿಗಳು ಅದು ಟಿಪ್ಪುವಿನದ್ದಲ್ಲ ಎಂದು ತಿರುಚಲು ಯಾವತ್ತೂ ಸಾಧ್ಯವಾಗುವುದಿಲ್ಲ.. ಯಾವುದೇ ಪುರಾತತ್ವ ಪ್ರಯೋಗಾಲಯಕ್ಕೆ ಕೊಂಡು ಹೋದರೂ ಅದು ಎಷ್ಟು ಹಳೆಯದೆಂದು ಸಾಬೀತಾಗುತ್ತದೆ. ಮತ್ತು ಜಗತ್ತಿನಲ್ಲೇ ಮೊಟ್ಟ ಮೊದಲ ಬಾರಿಗೆ ರಾಕೆಟ್ ಉಡಾಯಿಸಿದ ಕೀರ್ತಿ ಟಿಪ್ಪು ಸುಲ್ತಾನರದ್ದು. ಅಮೆರಿಕಾದ ಉನ್ನತ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯೇ ಟಿಪ್ಪು ಸುಲ್ತಾನರನ್ನು “Father of Rocket technology” ಎಂದು ಗೌರವಿಸಿದೆ. ನಾಸಾದಲ್ಲಿ ಟಿಪ್ಪು ಸುಲ್ತಾನರ ರಾಕೆಟ್ವೊಂದನ್ನು ಸಂರಕ್ಷಿಸಿಡಲಾಗಿದೆ. ಅಲ್ಲಿ ಟಿಪ್ಪು ಕುರಿತ ಮಾಹಿತಿಯನ್ನೂ ದಾಖಲಿಸಿಡಲಾಗಿದೆ. ಒಂದು ವೇಳೆ ಇಷ್ಟೆಲ್ಲಾ ಬಲಿಷ್ಟ ಪುರಾವೆಗಳಿಲ್ಲದಿರುತ್ತಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗೂಡಿನ ಬಳಿ ಎಂಬಲ್ಲಿ ಸಂರಕ್ಷಿಸಿಡಲಾಗಿರುವ ಫಿರಂಗಿಗೆ ಬೇರೆ ಅಪ್ಪಂದಿರು ಹುಟ್ಟಿಕೊಳ್ಳುತ್ತಿದ್ದರೇನೋ…
ಇತ್ತೀಚೆಗೆ ನಾನು ನನ್ನ ಸ್ನೇಹಿತರಾದ ಅಬೂ ಉಮರ್ ಮತ್ತು ಮಂಗ್ಳೂರ ರಿಯಾಝ್ ಜೊತೆ ಗೂಡಿನ ಬಳಿಗೆ ಹೋಗಿ ಆ ಕುರಿತಂತೆ ಅಲ್ಲಿನ ಹಿರಿಯರಲ್ಲಿ ಮತ್ತು ರಿಝ್ವಾನ್ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರಲ್ಲಿ ಮಾತನಾಡಿ ಕೆಲ ಮಾಹಿತಿ ಕಲೆ ಹಾಕಿದೆವು.
ನೂರಾರು ವರ್ಷಗಳಿಂದ ನೇತ್ರಾವತಿಯ ತಟದಲ್ಲಿ ಅನಾಥವಾಗಿ ಬಿದ್ದಿದ್ದ ಆ ಫಿರಂಗಿಯನ್ನು ಅನೇಕ ತಲೆಮಾರುಗಳು ಅಲ್ಲೇ ಇದ್ದುದನ್ನು ನೋಡಿದ್ದಾರೆ. ಅವರೆಲ್ಲರೂ ಅದನ್ನು ಟಿಪ್ಪು ಸುಲ್ತಾನರದ್ದೆಂದು ಹೇಳುತ್ತಾ ಬಂದರಾದರೂ ಅದನ್ನು ಸಂರಕ್ಷಿಸಿಡಬೇಕೆಂಬ ಬಗ್ಗೆ ಯಾವತ್ತೂ ಯೋಚಿಸಿರಲಿಲ್ಲ. ಕಾರಣವೇನೆಂದರೆ ಹಿಂದಿನ ಕಾಲದ ಬ್ಯಾರಿ ಮುಸ್ಲಿಮರು ಅನಕ್ಷರಸ್ಥರಾದುದರಿಂದ ಪ್ರಾಚ್ಯ ವಸ್ತುಗಳ ಮಹತ್ವ ಅವರಿಗೆ ತಿಳಿದೇ ಇರಲಿಲ್ಲ. ಅದರ ಬೃಹತ್ ಗಾತ್ರ ಮತ್ತು ತೂಕವೇ ಅದನ್ನು ರಕ್ಷಿಸಿದೆ ಎಂದು ಹೇಳಬಹುದು. ಒಂದು ವೇಳೆ ಅದು ಅಷ್ಟು ಭಾರವಿಲ್ಲದಿರುತ್ತಿದ್ದರೆ ಅದರ ಮತ್ತು ಇತಿಹಾಸದ ಮಹತ್ವವರಿಯದಿದ್ದ ಕಾಲದಲ್ಲಿ ಅದು ಗುಜಿರಿಯ ಸರಕಾಗಿ ಎಂದೋ ಹೋಗುತ್ತಿತ್ತು. ಹಾಗೆ ನದಿ ತಟದಲ್ಲಿ ಅನಾಥವಾಗಿ ಬಿದ್ದಿದ್ದ ಆ ಫಿರಂಗಿಯನ್ನು ಅಲ್ಲಿಂದ ಹೊತ್ತೊಯ್ಯಲು ಬಂಟ್ವಾಳದ ಎಸ್.ವಿ.ಎಸ್.ಕಾಲೇಜಿನವರು ಬಹಳಷ್ಟು ಶ್ರಮಿಸಿದ್ದರು. ಸ್ಥಳೀಯರ ಶಕ್ತವಾದ ಪ್ರತಿರೋಧದ ಫಲವಾಗಿ ಅದು ಅಲ್ಲೇ ಉಳಿಯಿತು. ಯಾವಾಗ ಅದನ್ನು ಹೊತ್ತೊಯ್ಯಲು ಅವರು ಬಂದರೋ ಆಗ ಸ್ಥಳೀಯರಿಗೆ ಅದರ ಮಹತ್ವದ ಅರಿವಾಗಿ ಅದನ್ನು ಸಂರಕ್ಷಿಸಿಡುವ ಕೆಲಸಕ್ಕೆ ಮುಂದಾದರು. ಹಾಗೆ ನದಿ ದಡದಲ್ಲಿ ಅನಾಥವಾಗಿ ಬಿದ್ದಿದ್ದ ಅದನ್ನು ಮೇಲೆತ್ತಿ ತಂದು ಒಂದು ಕಾಂಕ್ರೀಟಿನ ಪುಟ್ಟ ಗೋಪುರ ನಿರ್ಮಿಸಿ ಅದರ ಮೇಲೆ ಫಿರಂಗಿಯನ್ನು ಸಂರಕ್ಷಿಸಿಡಲಾಯಿತು. ಗೂಡಿನ ಬಳಿಯ ಹಳೇ ಸೇತುವೆಯ ಸನಿಹದಲ್ಲೇ ರಸ್ತೆಯ ಬದಿಯಲ್ಲಿ ಟಿಪ್ಪು ಸುಲ್ತಾನರ ಆ ಫಿರಂಗಿ ಕಾಣಸಿಗುತ್ತದೆ.
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಟಿಪ್ಪು ಜಲ ಮಾರ್ಗದ ಮೂಲಕ ಬರುತ್ತಿದ್ದ ಬ್ರಿಟಿಷ್ ಯುದ್ಧ ನೌಕೆಗಳನ್ನು ಹೊಡೆದುರುಳಿಸುವ ಸಲುವಾಗಿ ನದಿ ತೀರಗಳಲ್ಲಿ ಟಿಪ್ಪು ತನ್ನ ಸೈನ್ಯದ ತುಕಡಿಗಳನ್ನು ನಿಯೋಜಿಸುತ್ತಿದ್ದರು. ಆ ನಿಟ್ಟಿನಲ್ಲಿ ಮಂಗಳೂರಿನ ಬೋಳೂರಿನಲ್ಲಿ ಗುರುಪುರ ನದಿಯ ಮೂಲಕ ಬರುವ ಬ್ರಿಟಿಷ್ ಯುದ್ಧನೌಕೆಗಳನ್ನು ಹೊಡೆದುರುಳಿಸಲು
ಟಿಪ್ಪು ಒಂದು ಕಾವಲು ಕೋಟೆ (ಸುಲ್ತಾನ್ ಬತ್ತೇರಿ) ನಿರ್ಮಿಸಿದ್ದರು. ಮತ್ತು ಅದರಲ್ಲಿ ಫಿರಂಗಿಗಳನ್ನಿಡಲು ವ್ಯವಸ್ಥೆ ಮಾಡಿದ್ದರು ಮಾತ್ರವಲ್ಲದೇ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಸಂಗ್ರಹಿಸಿಡುವ ಗುಪ್ತ ಕೋಣೆಗಳನ್ನು ನಿರ್ಮಿಸಿದ್ದರು.
ಗೂಡಿನ ಬಳಿಯಲ್ಲಿ ಕಣ್ಣೆಟುಕುವಷ್ಟು ದೂರ ಕಾಣಬಹುದಾದ ಎತ್ತರದ ಗುಡ್ಡ ಪ್ರದೇಶಗಳಿರುವುದರಿಂದ ಅಲ್ಲಿಂದಲೇ ಟಿಪ್ಪುವಿನ ಸೈನ್ಯ ಬ್ರಿಟಿಷ್ ಯುದ್ದ ನೌಕೆಗಳನ್ನು ಗುರುತಿಸಲು ಸಾಧ್ಯವಿತ್ತು. ಬಹುಶಃ ಆ ಎತ್ತರದ ಗುಡ್ಡದಲ್ಲೇ ಸದ್ರಿ ಫಿರಂಗಿ ಇದ್ದಿರಬಹುದಾದ ಸಾಧ್ಯತೆಯೇ ಹೆಚ್ಚು. ಸ್ಥಳೀಯ ಹಿರಿಯರು ಹೇಳುವ ಪ್ರಕಾರ ಆ ಗುಡ್ಡದಲ್ಲಿ ಹಿಂದೆ ಹಲವು ಪುರಾತನ ವಸ್ತುಗಳು ಸಿಕ್ಕಿತ್ತು. ಅದರ ಐತಿಹಾಸಿಕ ಮಹತ್ವವರಿಯದೇ ಅದನ್ನು ಸಂರಕ್ಷಿಸಿಡುವ ಕೆಲಸವನ್ನು ಯಾರೂ ಮಾಡಿಲ್ಲ.
ಟಿಪ್ಪುವಿನ ನೆನಪಿಗಾಗಿ ಪ್ರತೀ ವರ್ಷ ಸ್ವಾತಂತ್ರೋತ್ಸವ ದಿನದಂದು ಗೂಡಿನ ಬಳಿಯಲ್ಲಿ ಎರಡು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ಅನ್ವರ್ ಸಾದತ್ ಗೂಡಿನ ಬಳಿ ಹೇಳಿದರು..
ಟಿಪ್ಪು ಎಂದರೆ ಒಂದು ವಿಸ್ಮಯ. ಟಿಪ್ಪುವಿನ ಹೆಸರನ್ನು ಅಳಿಸಲು ಯತ್ನಿಸಿದಷ್ಟು ಹೆಚ್ಚೆಚ್ಚು ಟಿಪ್ಪು ಪ್ರಸ್ತುತರಾಗುತ್ತಾರೆ..ಟಿಪ್ಪು ಸುಲ್ತಾನ್ ನಿರಂತರ…
