ತುರ್ಕಿ(05-10-2020): ತುರ್ಕಿ ಉತ್ಪನ್ನಗಳನ್ನು ಬಹಿಷ್ಕರಿಸಲು ಸೌದಿ ಚಿಂತನೆ ನಡೆಸಿದೆಯೆನ್ನಲಾಗಿದೆ. ಅಮದು, ಹೂಡಿಕೆ, ಪ್ರವಾಸೋದ್ಯಮ ಮೊದಲಾದ ಎಲ್ಲಾ ಕ್ಷೇತ್ರಗಳಲ್ಲೂ ತುರ್ಕಿಯನ್ನು ಬಹಿಷ್ಕರಿಸಲು ಕೌನ್ಸಿಲ್ ಆಫ್ ಸೌದಿ ಚೇಂಬರ್ ಆಫ್ ಕಾಮರ್ಸಿನ ಉನ್ನತ ಅಧಿಕಾರಿ ಅಜ್ಲಾನ್ ಅಲ್-ಅಜ್ಲಾನ್ ಕರೆ ನೀಡಿದ್ದಾರೆ.
ಸೌದಿ ಅರೇಬಿಯಾಕ್ಕೂ, ಅದರ ಆಡಳಿತಾಧಿಕಾರಿಗಳಿಗೂ, ಪ್ರಜೆಗಳಿಗೂ ವಿರುದ್ಧವಾದ ತುರ್ಕಿ ಸರಕಾರದ ನಿರಂತರ ನಡೆಗೆ ಪ್ರತೀಕಾರವಾಗಿ ತುರ್ಕಿ ಉತ್ಪನ್ನಗಳನ್ನು ಬಹಿಷ್ಕರಿಸುವುದು ಪ್ರತಿಯೊಬ್ಬ ಪ್ರಜೆಯ, ಉದ್ಯಮಿಗಳ, ಗ್ರಾಹಕರ ಜವಾಬ್ದಾರಿಯಾಗಿದೆಯೆಂದು ಅಜ್ಲಾನ್ ಟ್ವೀಟ್ ಮಾಡಿದ್ದಾರೆ. ತುರ್ಕಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು, ತುರ್ಕಿಯಲ್ಲಿ ಹೂಡಿಕೆ ಮಾಡುವುದು, ಪ್ರವಾಸಕ್ಕಾಗಿ ತುರ್ಕಿಗೆ ಪ್ರಯಾಣ ಬೆಳೆಸುವುದು ಇತ್ಯಾದಿಗಳನ್ನು ತ್ಯಜಿಸಬೇಕೆಂದು ಅವರು ಕರೆ ನೀಡಿದರು.
ತುರ್ಕಿಯ ಹಾಲಿ ಸರಕಾರವು ಅಸ್ತಿತ್ವಕ್ಕೆ ಬಂದಂದಿನಿಂದಲೂ ಅದರ ಜೊತೆಗೆ ಸೌದಿಯ ಸಂಬಂಧ ಅಷ್ಟಕ್ಕಷ್ಟೇ. ಸೌದಿ ಸೇರಿದಂತೆ ಕೆಲವು ದೇಶಗಳು ಕತರ್ ವಿರುದ್ಧ ಏಕಾಏಕಿ ದಿಗ್ಭಂಧನ ವಿಧಿಸಿದ ತಕ್ಷಣವೇ ತುರ್ಕಿ ಸರಕಾರವು ಕತರಿನ ನೆರವಿಗೆ ಧಾವಿಸಿತ್ತು. ಬಳಿಕ ಈ ಎರಡು ದೇಶಗಳ ನಡುವಿನ ಸಂಬಂಧ ಇನ್ನಷ್ಟು ಹಳಸಿದೆ.