ಬೆಂಗಳೂರು(05-02-2021): ರಾಜ್ಯದಲ್ಲಿ ಮೂರು ಹಂತದ ಪಂಚಾಯತಿ ವ್ಯವಸ್ಥೆಯನ್ನು ಎರಡು ಹಂತಕ್ಕೆ ಇಳಿಸುವ ಕುರಿತು ಗಂಭೀರವಾದ ಚರ್ಚೆ ಸದನದಲ್ಲಿ ನಡೆದಿದೆ.
ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಕುಮಾರ್ ಬಂಗಾರಪ್ಪ ಈ ಕುರಿತು ವಿಚಾರವನ್ನು ಪ್ರಸ್ತಾಪಿಸಿದ್ದು, ತಾಲೂಕು ಪಂಚಾಯಿತಿಗೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಸಿಗುವ ಮಹತ್ವ ಮಹತ್ವವೂ ಸಿಗುತ್ತಿಲ್ಲ. ಆದ್ದರಿಂದ ತಾಲೂಕ ಪಂಚಾಯತಿ ವ್ಯವಸ್ಥೆಯನ್ನು ಬದಲಾಯಿಸಿ 2 ರೀತಿಯ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮಾತನಾಡಿ, ಪಂಚಾಯಿತಿಗಳು ಕೇಂದ್ರದ ಕಾನೂನಿನ ಮೂಲಕ ಅಸ್ತಿತ್ವಕ್ಕೆ ಬಂದಿವೆ. ಈ ಬಗ್ಗೆ ನಾವು ನಿರ್ಧರಿಸಲು ಸಾಧ್ಯವಿಲ್ಲ. ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಕಳುಹಿಸಲಾಗುವುದು ಎಂದು ಸದನದಲ್ಲಿ ಉತ್ತರಿಸಿದ್ದಾರೆ.