ವಿಧಾನ ಪರಿಷತ್ ನಲ್ಲಿ ಮತಾಂತರ ತಡೆ ಮಸೂದೆ ಮಂಡನೆಯಿಲ್ಲ : ಜನವರಿಯಲ್ಲಿ ಪ್ರಸ್ತಾಪ ಮಾಡಲು ತೀರ್ಮಾನ

ವಿಧಾನ ಸಭಾ ಕಲಾಪದಲ್ಲಿ ಇತ್ತೀಚೆಗೆ ಬಹಳ ವಿರೋಧದ ನಡುವೆಯೂ ಅಂಗೀಕಾರಗೊಳಿಸಿದ ಮತಾಂತರ ನಿಷೇಧ ಕಾಯಿದೆಯು ಮೇಲ್ಮನೆಯಾದ ವಿಧಾನ ಪರಿಷತ್ ನಲ್ಲಿ ಮಂಡನೆಗೊಳಿಸಲು ಬಿಜೆಪಿ ಹಿಂದೆ ಸರಿದಿದೆ. ಕಾಂಗ್ರೆಸ್ ಒತ್ತಾಯಕ್ಕೆ ಸಭಾಪತಿ ಮತ್ತು ಬಿಜೆಪಿ ಸಚಿವರು ಮಣಿದಿದ್ದಾರೆ. ಮುಂದಿನ ಜನವರಿಯಲ್ಲಿ ಇದರ ಬಗ್ಗೆ ಪ್ರಸ್ತಾಪ ಮಂಡಿಸಿ, ಮಂಡನೆಯನ್ನು ಸಲ್ಲಿಸುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಹಸುಗಳ ಬಗ್ಗೆ ಪ್ರೀತಿಯಿದ್ದರೆ ಮೊದಲು ಗೋಮಾಂಸ ರಫ್ತನ್ನು ನಿಲ್ಲಿಸಲಿ! :ಬಿಜೆಪಿಗೆ ಎಚ್‌.ಸಿ.ಮಹಾದೇವಪ್ಪ ತಿರುಗೇಟು

ಬೆಂಗಳೂರು: ಬೆಲೆ ಏರಿಕೆಯ ನಡುವೆ ದೀಪಾವಳಿಯೂ ಬೇಡ ಏನೂ ಬೇಡ ಎಂಬ ಪರಿಸ್ಥಿತಿಗೆ ಜನ ಸಾಮಾನ್ಯರನ್ನು ನೂಕಿರುವ ಬಿಜೆಪಿಗರು ಗೋವಿನ ಹೆಸರಲ್ಲಿ ರಾಜಕೀಯ ಮಾಡುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಬೆಳವಣಿಗೆ. ಇವರಿಗೆ ನಿಜವಾಗಲೂ ಹಸುಗಳ ಬಗ್ಗೆ ಪ್ರೀತಿ ಇದ್ದರೆ ಮೊದಲು ಇವರು ಮಾಡುತ್ತಿರುವ ಗೋಮಾಂಸ ರಫ್ತನ್ನು ನಿಲ್ಲಿಸಲಿ! ಎಂದು ಬಿಜೆಪಿಗೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಾ.ಎಚ್.ಸಿ‌.ಮಹಾದೇವಪ್ಪಾ ತಿರುಗೇಟು ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ ಅವರು, “ದೀಪಾವಳಿ ಹಬ್ಬದಂದು ದೇವಾಲಯಗಳಲ್ಲಿ ಗೋ ಪೂಜೆ ಮಾಡಬೇಕೆಂದು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರವು ದೀಪಾವಳಿಯ ವೇಳೆ ಸಹಜವಾಗಿ ನಡೆಯುವ ಗೋ ಪೂಜೆ ಆಚರಣೆಗಳಿಗೂ ತನ್ನ ರಾಜಕೀಯ ಬಣ್ಣ ಬಳಿದಿದೆ” ಎಂದಿದ್ದಾರೆ.

ಗ್ರಾಮೀಣ ಭಾರತದಲ್ಲಿ ಕೃಷಿಯ ಮೂಲಕ ಬದುಕು ಕಂಡು ಕೊಂಡಿರುವ ಎಲ್ಲಾ ರೈತರೂ ಕೂಡಾ ದೀಪಾವಳಿ ಮತ್ತು ಸಂಕ್ರಾಂತಿ ಹಬ್ಬದ ವೇಳೆ ಹಸುಗಳ ಮೈತೊಳೆದು, ಚಂದದ ಅಲಂಕಾರ ಮಾಡಿ, ನಂತರ ಕಿಚ್ಚು ಹಾಯಿಸುವಂತಹ ಆಚರಣೆ ಇದೆ. ಈ ಆಚರಣೆಯನ್ನು ಬಿಜೆಪಿಗರೇನು ರೈತರಿಗೆ ಹೇಳಿಕೊಟ್ಟದ್ದಲ್ಲ, ಬದಲಿಗೆ ರೈತರ ಬದುಕಿನ ಕ್ರಮದಲ್ಲೇ ಅದು ಬಹು ಕಾಲದಿಂದಲೂ ಇರುವಂತದ್ದು ಎಂದು ಪ್ರತಿಕ್ರಿಯಿಸಿದ್ದಾರೆ.

ನಂತರ ಈ ದೀಪಾವಳಿಗೂ ಮುನ್ನ ಹೈನುಗಾರಿಕೆಯನ್ನೇ ಉಪ ಕಸುಬಾಗಿಸಿಕೊಂಡಿರುವ ನಮ್ಮೆಲ್ಲಾ ರೈತರ ಕುಟುಂಬಗಳಿಗೆ ತಲಾ 2 ಹಸುಗಳನ್ನು ನೀಡುವ ಮೂಲಕ ಹಸುವಿನ ಮತ್ತು ರೈತರ ಬದುಕಿಗೆ ನೆರವಾಗಲಿ. ಇನ್ನು ರಸಗೊಬ್ಬರದ ಬೆಲೆ ಗಗನಕ್ಕೆ ಏರಿದ್ದು ರೈತರು ಕಣ್ಣು ಬಾಯಿ ಬಿಡುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇವಾಲಯದಲ್ಲಿ ಗೋ ಪೂಜೆಯ ಹೆಸರಲ್ಲಿ ನಾಟಕ ಮಾಡದೇ ರಸಗೊಬ್ಬರದ ಬೆಲೆಯನ್ನು ಇಳಿಕೆ ಮಾಡಲಿ ಎಂದು ಆಗ್ರಹಿಸುವ ಮೂಲಕ ಸವಾಲು ಹಾಕಿದ್ದಾರೆ.

ಅತಿ ಹೆಚ್ಚು ಗೋಮಾಂಸವನ್ನು ರಫ್ತು ಮಾಡುತ್ತಲೇ ಗೋ ಪೂಜೆಯ ನಾಟಕವಾಡುವ ಬಿಜೆಪಿಗರು ರೈತರ ಪಾಲಿಗೆ ಮತ್ತು ರೈತರ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಎಂದೆಂದಿಗೂ ಹಸುಗಳ ಪಾಲಿಗೆ ಮಾರಕವಾಗಿದ್ದಾರೆ ಎಂಬುದು ಸತ್ಯವಾದ ಸಂಗತಿ! ಎಂದು ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಅವರಂತೆ ನಾವು ಹಣ ಹಂಚಿ ಮತ ಕೇಳುತ್ತಿಲ್ಲ, ಐದು ವರ್ಷದ ದುಡಿಮೆಗೆ ಕೂಲಿಯ ರೂಪದಲ್ಲಿ ಮತ ಕೇಳುತ್ತಿದ್ದೇವೆ : ಸಿದ್ದರಾಮಯ್ಯ

ಹಾನಗಲ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರದ ಯಾವುದಾದರೂ ಒಂದು ಜನಪರ ಯೋಜನೆಯ ಹೆಸರು ಹೇಳಲಿ ನೋಡೋಣ. ಅವರಿಂದ ಸಾಧ್ಯವಿದೆಯಾ? ತಮ್ಮ ಬಣ್ಣ ಬಯಲಾಗುತ್ತೆ ಎಂದು ಹೆದರಿ ಅವರು ಒಂದೇ ವೇದಿಕೆಗೆ ಚರ್ಚೆಗೆ ಬರಲು ನಿರಾಕರಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಹಾನಗಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಪರವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು. 2013 … Read more

ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ : ರಾಜ್ಯ ಬಿಜೆಪಿ ಟ್ವೀಟ್

ಬೆಂಗಳೂರು: ಸಮಾಜವನ್ನು ಜಾತಿ ಆಧಾರದ ಮೇಲೆ ಒಡೆದು ರಾಜಕೀಯ ಲಾಭ ಪಡೆಯುವುದರಲ್ಲಿ ಸಿದ್ದರಾಮಯ್ಯ ಅವರಿಗಿಂತ ನಿಷ್ಣಾತರು ಬೇರೆ ಇಲ್ಲ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಈ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿದ ಬಿಜೆಪಿ, ‘ವಿದ್ಯಾರ್ಥಿಗಳ ಪ್ರವಾಸ ಕಾರ್ಯಕ್ರಮದಲ್ಲೂ ಜಾತಿ ಹುಡುಕಿದವರು ನೀವಲ್ಲವೇ ಸಿದ್ದರಾಮಯ್ಯ?’ ಎಂದು ಪ್ರಶ್ನಿಸಿದೆ.

ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ. ಅದೇ ಸಿದ್ದರಾಮಯ್ಯ ಇಂದು ಮತಗಳಿಸಲು ಸುಳ್ಳಿನ ಸರಮಾಲೆ ಸೃಷ್ಟಿಸುತ್ತಿದ್ದಾರೆ. ವೀರಶೈವ, ಲಿಂಗಾಯತ ಎಂದು ವಿಭಜನೆಯ ಬೆಂಕಿ ಹಚ್ಚಿದ ನೀವು ಯಾವ ಆಧಾರದಲ್ಲಿ ಜಾತಿ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತೀರಿ ಸಿದ್ದರಾಮಯ್ಯ? ಜಾತಿ ಎಂಬುದು ಈ ದೇಶದಲ್ಲಿ ವಾಸ್ತವ ಎನ್ನುವ ಸಿದ್ದರಾಮಯ್ಯ ಅವರು ಜಾತಿ ರಾಜಕೀಯ ಬಿಟ್ಟು ಬೇರೇನು ಮಾಡಿಲ್ಲ ಎಂದು ಕಿಡಿಕಾರಿದೆ.

ನಿಜವಾಗಿಯೂ ಜಾತ್ಯತೀತರಾಗಿದ್ದರೆ ಉಪಚುನಾವಣೆ ಸಂದರ್ಭದಲ್ಲೂ ಜಾತಿವಾರು ಸಭೆ ನಡೆಸುವ ಅಗತ್ಯವಿತ್ತೇ? ಸಿದ್ದರಾಮಯ್ಯನವರೇ, ನಿಮ್ಮಿಂದ ಜಾತಿಯನ್ನು ಉಪಜಾತಿಯಾಗಿ ಒಡೆಯುವುದಕ್ಕೆ ಮಾತ್ರ ಸಾಧ್ಯ. ತಿಲಕ ಕಂಡರೆ ಭಯ ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಹಿಂದೂ ಧರ್ಮದ ಅವಹೇಳನ ಮಾಡಿದರು. ಆಗ ಅವರಿಗೆ ಅಲ್ಪಸಂಖ್ಯಾತರ ಓಲೈಕೆ ಮುಖ್ಯವಾಗಿತ್ತು. ಅದಕ್ಕಾಗಿ ಟಿಪ್ಪು ಜಯಂತಿ ನಡೆಸಿದರು ಎಂದು ಸಿದ್ದು ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಸಿದ್ದರಾಮಯ್ಯನವರೇ, ಇದು ಸಮಾಜ ವಿಭಜನೆಯಲ್ಲವೇ ? ಜಾತಿ, ಕೋಮು ರಾಜಕೀಯವನ್ನು ಮಾಧ್ಯಮ ರಂಗದಲ್ಲಿಯೂ ತುರುಕಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದಾಗಿದೆ. ಅಲ್ಪಸಂಖ್ಯಾತ ಸಮುದಾಯದ ಪತ್ರಕರ್ತರಿಗೆ ಮಾತ್ರ ಮಾಧ್ಯಮ ಕಿಟ್ ಒದಗಿಸಲು ಆದೇಶ. ಅಲ್ಪಸಂಖ್ಯಾತರ ಒಡೆತನದ ಪತ್ರಿಕೆಗಳಿಗೆ ಜಾಹಿರಾತು ನೀಡಬೇಕು ಎಂದು ಸುತ್ತೋಲೆ. ಇವೆಲ್ಲ ನಿಮ್ಮ ಸಾಧನೆಯಲ್ವೇ ಸಿದ್ದರಾಮಯ್ಯ? ಎಂದು #ಜಾತಿವಿಭಜಕಸಿದ್ಧರಾಮಯ್ಯ ಎನ್ನುವ ಹ್ಯಾಶ್ ಟ್ಯಾಗ್ ಮೂಲಕ ರಾಜ್ಯ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದೆ.

ಜನರಿಗೆ ತೊಂದರೆ ಕೊಡುವಲ್ಲಿ ಮೋದಿ ಸರ್ಕಾರ ದಾಖಲೆ ಸೃಷ್ಟಿಸಿದೆ: ಪ್ರಿಯಾಂಕಾ ಗಾಂಧಿ

ನವದೆಹಲಿ: ಪೆಟ್ರೋಲ್ ಬೆಲೆಗಳ ಮೇಲಿನ ತೆರಿಗೆ ಡಕಾಯಿತಿ ಏರುತ್ತಿದೆ, ಎಲ್ಲಿಯಾದರೂ ಚುನಾವಣೆ ನಡೆದರೆ ಮಾತ್ರ ಅದಕ್ಕೆ ಸ್ವಲ್ಪ ವಿರಾಮ ಸಿಗುತ್ತದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂಧನ ಬೆಲೆ ಏರಿಕೆ ಕುರಿತು ಟ್ವೀಟ್ ಮಾಡಿದ ಅವರು ಕಾಂಗ್ರೆಸ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು, ಪೆಟ್ರೋಲ್ ಬೆಲೆಯ ಮೇಲೆ “ತೆರಿಗೆ ಡಕಾಯಿತಿ” ಹೆಚ್ಚುತ್ತಿದೆ ಮತ್ತು ದೇಶದಲ್ಲಿ ಎಲ್ಲೋ ಒಂದು ಕಡೆಗೆ ಚುನಾವಣೆ ನಡೆದರೆ ಅದಕ್ಕೆ ಸ್ವಲ್ಪ ಬಿಡುವು ಸಿಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದರು, “ಮೋದಿ ಸರ್ಕಾರ ಜನರಿಗೆ ತೊಂದರೆ ನೀಡುವಲ್ಲಿ ದಾಖಲೆಗಳನ್ನು ಸೃಷ್ಟಿಸಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಮೋದಿ ಸರ್ಕಾರ ಸಾರ್ವಜನಿಕರಿಗೆ ತೊಂದರೆ ನೀಡುವಲ್ಲಿ ದೊಡ್ಡ ದಾಖಲೆ ಸೃಷ್ಟಿಸಿದೆ. ಅತಿ ಹೆಚ್ಚು ನಿರುದ್ಯೋಗ, ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡುವುದು, ಒಂದು ವರ್ಷದಲ್ಲಿ ಪೆಟ್ರೋಲ್ ದರಗಳು ಅತೀ ಹೆಚ್ಚಾಗಿದ್ದು ಮೋದಿ ಸರ್ಕಾರದಲ್ಲಿ ಎಂದು ಪ್ರಿಯಾಂಕಾ ಗಾಂಧಿ ಟ್ವಿಟ್ಟರ್ ನಲ್ಲಿ ಆರೋಪಿಸಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ “ತೈಲ ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯುಪಿ ಚುನಾವಣೆಯಲ್ಲಿ ಗೆದ್ದರೆ ಕೃಷಿ ಸಾಲಮನ್ನಾ, ಶಾಲಾ ಬಾಲಕಿಯರಿಗೆ ಉಚಿತ ಸ್ಮಾರ್ಟ್ ಫೋನ್,ಇ-ಸ್ಕೂಟರ್ : ಪ್ರಿಯಾಂಕಾ ಗಾಂಧಿ ಭರವಸೆ

ಲಕ್ನೋ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಯುಪಿ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಶನಿವಾರ ಉತ್ತರ ಪ್ರದೇಶದ ಜನರಿಗೆ ಏಳು ಭರವಸೆಗಳನ್ನು ನೀಡಿದ್ದಾರೆ.

ಮುಂಬರುವ ಯುಪಿ ಚುನಾವಣೆಯಲ್ಲಿ ಗೆದ್ದರೆ ಪಕ್ಷವು ನೀಡಲಿರುವ ಭರವಸೆಗಳು ಘೋಷಣೆ ಮಾಡಿದ್ದಾರೆ. ಕೃಷಿ ಸಾಲ ಮನ್ನಾ ಮತ್ತು 20 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವುದನ್ನು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.

ಬಾರಾಬಂಕಿಯಲ್ಲಿ ಕಾಂಗ್ರೆಸ್ ನಾಯಕರು ಕೈಗೊಂಡ ಮೂರು ‘ಪ್ರತಿಜ್ಞಾ ಯಾತ್ರೆ’ಗಳ ಫ್ಲಾಗ್-ಆಫ್ ಸಮಾರಂಭದಲ್ಲಿ ಈ ಭರವಸೆಗಳನ್ನು ನೀಡಿದ್ದಾರೆ. ಮೂರು ಯಾತ್ರೆಗಳು ಮೂರು ವಿಭಿನ್ನ ಮಾರ್ಗಗಳಾದ ಬರಾಬಂಕಿಯಿಂದ ಬುಂದೇಲ್‌ಖಂಡ್, ಸಹರಾನ್‌ಪುರದಿಂದ ಮಥುರಾ ಮತ್ತು ವಾರಣಾಸಿಯಿಂದ ರಾಯ್ ಬರೇಲಿಗೆ ನವೆಂಬರ್ 1 ರಂದು ತಲುಪಲಿದೆ ಎಂದು ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ನೀಡಿದ ಏಳು ಭರವಸೆಗಳು:

ಯುಪಿ ಚುನಾವಣೆಯಲ್ಲಿ ಮಹಿಳೆಯರಿಗೆ 40 ಶೇಕಡಾ ಕಾಂಗ್ರೆಸ್ ಟಿಕೆಟ್ ಮತ್ತು ಹುಡುಗಿಯರಿಗೆ ಉಚಿತ ಸ್ಮಾರ್ಟ್ ಫೋನ್ ಮತ್ತು ಇ-ಸ್ಕೂಟರ್, ಕೃಷಿ ಸಾಲ ಮನ್ನಾ, ಯುವಕರಿಗೆ 20 ಲಕ್ಷ ಸರ್ಕಾರಿ ಉದ್ಯೋಗ ನೀಡುವೆ ಎಂದಿದ್ದಾರೆ.

 

ರೈತರಿಗೆ ವಿದ್ಯುತ್ ಬಿಲ್ ಅರ್ಧದಷ್ಟು (ಮತ್ತು ಸಾಂಕ್ರಾಮಿಕ ಅವಧಿಯಲ್ಲಿ ಯಾವುದೇ ವಿದ್ಯುತ್ ಬಿಲ್‌ಗಳನ್ನು ವಿಧಿಸಲಾಗುವುದಿಲ್ಲ) ಕೋವಿಡ್ ಅವಧಿಯಲ್ಲಿ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸಿದ ಕುಟುಂಬಗಳಿಗೆ ರೂ. 25,000 ನೆರವು ಮತ್ತು ಅಕ್ಕಿಗೆ ಪ್ರತಿ ಕ್ವಿಂಟಾಲ್ ಬೆಂಬಲ ಬೆಲೆಗೆ ಕನಿಷ್ಠ ರೂ 2,500 ಮತ್ತು ಕಬ್ಬಿಗೆ ಪ್ರತಿ ಕ್ವಿಂಟಾಲ್‌ಗೆ 400 ರೂಪಾಯಿ ಬೆಲೆ ನೀಡುವುದಾಗಿ ಪ್ರಿಯಾಂಕಾ ಗಾಂಧಿ ಘೋಷಿಸಿದ್ದಾರೆ.

ಕಟೀಲ್ ಕೇವಲ ಜೋಕರ್ ಮಾತ್ರ ಅಲ್ಲ, ಸಂಸ್ಕಾರವೇ ಇಲ್ಲದ ಅತ್ಯಂತ ತುಚ್ಛ ವ್ಯಕ್ತಿ ಕೂಡ ಹೌದು : ದಿನೇಶ್ ಗುಂಡೂರಾವ್ ತಿರುಗೇಟು

ಬೆಂಗಳೂರು: ರಾಹುಲ್ ಗಾಂಧಿಯವರನ್ನು ಡ್ರಗ್ ಪೆಡ್ಲರ್ ಎಂದಿರುವ ಕಟೀಲ್ ಕೇವಲ ಜೋಕರ್ ಮಾತ್ರ ಅಲ್ಲ, ಸಂಸ್ಕಾರವೇ ಇಲ್ಲದ ಅತ್ಯಂತ ತುಚ್ಛ ವ್ಯಕ್ತಿ ಕೂಡ ಹೌದು. ಶತಮಾನದ ಶ್ರೇಷ್ಟ ಅವಿವೇಕಿಯಂತೆ ವರ್ತಿಸುವ ಕಟೀಲ್‌ರವರಿಗೆ ಬಹುಶಃ ಡ್ರಗ್ಸ್ ತೆಗೆದುಕೊಳ್ಳುವ ಅಭ್ಯಾಸವಿರಬಹುದು.ಆ ಡ್ರಗ್ಸ್ ನಶೆಯಲ್ಲೇ ಕಟೀಲ್ ಇಂತಹ ಅಸಂಬದ್ಧ ಮಾತುಗಳನ್ನು ಆಡುತ್ತಾರೆನೋ? ಎಂದು ಕೆಪಿಸಿಸಿ ವಕ್ತಾರ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿಯವರನ್ನು “ಡ್ರಗ್ ಪೆಡ್ಲರ್” ಎಂದು ಕರೆದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕಾಂಗ್ರೆಸ್ ವಕ್ತಾರ ದಿನೇಶ್ ಗುಂಡೂರಾವ್ ಮಾತಿನ ಚಾಟಿ ಬೀಸಿದ್ದಾರೆ.

ಕಟೀಲ್‌ರವರು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಭ್ಯತೆಯಿಂದ ಮಾತನಾಡುವ ಸಂಸ್ಕೃತಿ ಕಲಿಯಲಿ. ಇಲ್ಲವೇ ಈ ರೀತಿ ಮಾತನಾಡುವುದು RSS ಕಲಿಸಿದ ಸಂಸ್ಕಾರ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲಿ.ಕುಲವಂ ನಾಲಗೆ ನುಡಿಯಿತು ಎಂಬಂತೆ ಕಟೀಲ್‌ರವರ ಸಂಸ್ಕಾರ ಮತ್ತು ಸಂಸ್ಕೃತಿಯೇನು ಎಂಬುದು ಅವರ ಮಾತಿನಿಂದಲೇ ತಿಳಿಯುತ್ತದೆ ಎಂದಿದ್ದಾರೆ.

ನಳೀನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಹಾಗೂ ಸಂಸದರಾಗಿ ರಾಹುಲ್ ಗಾಂಧಿಯವರ ಬಗ್ಗೆ ಅತ್ಯಂತ ಕೀಳುಮಟ್ಟದ ಹಾಗೂ ಆಧಾರರಹಿತ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆ ಕಟೀಲ್‌ರವರ ಕೊಳಕು‌ ಮನಃಸ್ಥಿತಿಯನ್ನು ಅನಾವರಣ ಮಾಡಿದೆ. ಸಂಸ್ಕೃತಿ ಮತ್ತು ದೇವರ ಬಗ್ಗೆ ಮಾತನಾಡುವ ಬಿಜೆಪಿಯವರ ಅಶ್ಲೀಲ ವಿಡಿಯೋಗಳು ಹರಿದಾಡುತ್ತಿವೆ. ಆ ಬಗ್ಗೆ ಕ್ರಮವೇನು.? ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡಲು ಕಟೀಲ್‌ರವರಿಗೆ ಯಾವ ನೈತಿಕತೆಯಿದೆ. ರಾಜೀವ್‌ ಗಾಂಧಿ, ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹೆಗ್ಗಳಿಕೆ ನೆಹರೂ ಕುಟುಂಬದವರದ್ದು. ದೇಶಕ್ಕಾಗಿ ಬಿಜೆಪಿಯವರ ತ್ಯಾಗವೇನು.? ಕಟೀಲ್‌ರವರ ಕೊಡುಗೆಯೇನು.?

 

BJPಯವರಿಗೆ ಸಂಸ್ಕಾರದ ಗಂಧ ಗಾಳಿ ಗೊತ್ತಿದ್ದರೆ, ಹಾಗೂ ಸಾರ್ವಜನಿಕ ಭಾಷಾ ಪ್ರಯೋಗದ ಅರಿವಿದ್ದರೆ, ಅವಿವೇಕತನದ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಕಟೀಲ್ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಕಟೀಲ್‌ರಂತಹ ಶುದ್ಧ ಅಜ್ಞಾನಿಗಳಿಗೆ ಅಧ್ಯಕ್ಷ ಪಟ್ಟ ಕೊಟ್ಟ ತಮ್ಮ ಅಜ್ಞಾನವನ್ನು ಮತ್ತು ತಪ್ಪನ್ನು BJPಯವರು ಇನ್ನಾದರೂ ತಿದ್ದಿಕೊಳ್ಳಲಿ. ಇದು BJPಯ ನೈತಿಕತೆಯ ಪ್ರಶ್ನೆ ಎಂದು ದಿನೇಶ್ ಗುಂಡೂರಾವ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಲ್ಲಿದ್ದಲು ಹಾಗೂ ವಿದ್ಯುತ್ ಕೊರತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೇಜವಾಬ್ದಾರಿತನವೇ ಕಾರಣ: ಕಾಂಗ್ರೆಸ್

ಬೆಂಗಳೂರು: ಬೇಜವಾಬ್ದಾರಿ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಕತ್ತಲೆ ಆವರಿಸಿದೆ. ರಾಜ್ಯ ಬಿಜೆಪಿ ಸರ್ಕಾರದ ನಾಯಕರು ಹೇಳುವ ‘ಡಬಲ್ ಇಂಜಿನ್ ಗ್ರೋಥ್’ ಎಂಬ ಮಾತುಗಳ ಡೋಂಗಿತನಕ್ಕೆ ಮತ್ತೊಂದು ಉದಾಹರಣೆ ಇದು ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

ಈ ಬಗ್ಗೆ #ಕತ್ತಲಲ್ಲಿಕರ್ನಾಟಕ ಎನ್ನುವ ಹ್ಯಾಶ್ ಟ್ಯಾಗ್ ಮೂಲಕ ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯದವರೇ ಆಗಿದ್ದರೂ ರಾಜ್ಯಕ್ಕೆ ಕಲ್ಲಿದ್ದಲು ಕೊರತೆ ಉಂಟಾಗಿದ್ದ ವಿಪರ್ಯಾಸ. ಇಂಧನ ತೈಲಗಳ ಬೆಲೆ ಏರಿಕೆಗೆ ಎಲೆಕ್ಟ್ರಿಕ್ ವಾಹನ ಬಳಸಿ ಎಂದು ಬಿಟ್ಟಿ ಸಲಹೆ ನೀಡುತ್ತಿದ್ದರು ರಾಜ್ಯ ಬಿಜೆಪಿ ನಾಯಕರು. ಆದರೆ ರಾಜ್ಯ ಬಿಜೆಪಿ ನಾಯಕರಿಗೆ ವಿದ್ಯುತ್ ಪುಕ್ಕಟೆಯಾಗಿ ದೊರಕುತ್ತದೆ ಎಂಬ ಕಲ್ಪನೆ ಇರಬಹುದೇನೋ! ಎಂದು ಪ್ರಶ್ನಿಸಿದೆ.

ಇಂದು ಅದೇ ಮೂರ್ಖ ಸಲಹೆಗಾರರು ರಾಜ್ಯವನ್ನು ಕತ್ತಲೆಯಲ್ಲಿ ಮುಳುಗಿಸಿದ್ದಾರೆ. ರಾಜ್ಯದಲ್ಲಿ ಸೃಷ್ಟಿಯಾದ ಕಲ್ಲಿದ್ದಲು ಹಾಗೂ ವಿದ್ಯುತ್ ಬಿಕ್ಕಟ್ಟಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬೇಜವಾಬ್ದಾರಿತನವೇ ಕಾರಣ. ಕಲ್ಲಿದ್ದಲು ಕೊರತೆ ತೀವ್ರಗೊಳ್ಳುವವರೆಗೂ ಕಣ್ಮುಚ್ಚಿ ಕುಳಿತಿದ್ದೇಕೆ? ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹೊಂದಾಣಿಕೆ ಇಲ್ಲವೇ? ಬಿಕ್ಕಟ್ಟು ಎದುರಿಸಲು ಸರ್ಕಾರದ ಕಾರ್ಯಸೂಚಿ ಏನು? ವಾಸ್ತವವನ್ನು ಮರೆಮಾಚಿ ದೇಶಕ್ಕೆ ಸುಳ್ಳು ಹೇಳುವುದು ಬಿಜೆಪಿಗೆ ಅಭ್ಯಾಸವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಹಿಂದೆ ಆಕ್ಸಿಜನ್ ಕೊರತೆ ಇದ್ದಾಗಲೂ “ಆಕ್ಸಿಜನ್ ಕೊರತೆಯೇ ಇಲ್ಲ” ಎಂದು ಸುಳ್ಳುಗಳ ಮೂಲಕ ದುರಂತಗಳಿಗೆ ಕಾರಣರಾದರು. ಈಗ “ಕಲ್ಲಿದ್ದಲು ಕೊರತೆಯೇ ಇಲ್ಲ” ಎಂದು ಸುಳ್ಳು ಹೇಳುತ್ತಲೇ ಬಿಜೆಪಿ ರಾಜ್ಯ ಸರ್ಕಾರ ರಾಜ್ಯವನ್ನ ಕತ್ತಲೆಗೆ ತಳ್ಳುತ್ತಿದೆ.

ಲಾಕ್‌ಡೌನ್ ನಂತರ ದೇಶದ ಆರ್ಥಿಕ ಪುನಶ್ಚೇತನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ, ಯಾವ ಯೋಜನೆಯನ್ನೂ ರೂಪಿಸಲಿಲ್ಲ. ಇಂಧನ ತೈಲಗಳ ಬೆಲೆ ಏರಿಕೆ, ಕಲ್ಲಿದ್ದಲು ಕೊರತೆಯಿಂದ ರಾಜ್ಯದ ಆರ್ಥಿಕತೆಯ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ. ರಾಜ್ಯ ಬಿಜೆಪಿ ಸರ್ಕಾರ ಅಸಾಮರ್ಥ್ಯಕ್ಕೆ ಜನತೆ ಬೆಲೆ ತೆರಬೇಕಾಗಿರುವುದು ದುರಂತ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.

ನರೇಂದ್ರ ಮೋದಿ ತಮ್ಮ ಹೆಸರನ್ನು ಮೌನೇಂದ್ರ ಮೋದಿ ಎಂದು ಬದಲಿಸಿದರೆ ಸೂಕ್ತ : ರಾಮಲಿಂಗಾರೆಡ್ಡಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ತಮ್ಮ ಹೆಸರನ್ನು ಮೌನೇಂದ್ರ ಮೋದಿ ಎಂದು ಬದಲಿಸಿದರೆ ಸೂಕ್ತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.

ಉತ್ತರ ಪ್ರದೇಶ ಲಖೀಂಪುರ್ ಖೇರಿಯಲ್ಲಿ ನಡೆದ ಪ್ರತಿಭಟನಾನಿರತ ರೈತರ ಹತ್ಯಾಕಾಂಡ ಖಂಡಿಸಿ, ರೇಸ್ ಕೋರ್ಸ್ ರಸ್ತೆಯ ಗಾಂಧಿ ಪ್ರತಿಮೆ ಮುಂಭಾಗ ಕಾಂಗ್ರೆಸ್ ನಿಂದ ‘ಮೌನ ವ್ರತ ಸತ್ಯಾಗ್ರಹ’ ನಡೆಸಲಾಯಿತು. ಈ ಹತ್ಯಾಕಾಂಡದಲ್ಲಿ ಆಶಿಶ್ ಮಿಶ್ರಾ ಆರೋಪಿಯಾಗಿರುವುದರಿಂದ ಕೇಂದ್ರ ಸಚಿವ ಅಜಯ್ ಮಿಶ್ರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಇಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.

ರೈತರ ಹತ್ಯಾಕಾಂಡ ಖಂಡಿಸಿ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ಇಂದು ಹಮ್ಮಿಕೊಳ್ಳಲಾಗಿದ್ದ ‘ಮೌನ ವ್ರತ’ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋವಿಡ್ ವೇಳೆ 3 ತಿಂಗಳು ಮೌನವಾಗಿದ್ದ ಪ್ರಧಾನಿ, ಬಿಹಾರ್ ಚುನಾವಣೆ ಘೋಷಣೆ ಆಗುವವರೆಗೂ ಮನೆಯಿಂದ ಹೊರಬಂದಿರಲಿಲ್ಲ , ದೇಶದಲ್ಲಿ ನಡೆದ ಯಾವುದೇ ಅಹಿತರ ಘಟನೆ ಬಗ್ಗೆಯೂ ಮಾತನಾಡಲು ಸಮಯವಿಲ್ಲದ ಮೋದಿಯಿಂದ ಯಾರಿಗೂ ನ್ಯಾಯ ಸಿಗುವುದಿಲ್ಲ ಎಂದು ಅವರು ಆರೋಪಿಸಿದರು.

ಜಲಿಯನ್ ವಾಲಾಬಾಗ್ ಘಟನೆ ಮೀರಿಸುವ ಹತ್ಯಾಕಾಂಡ ಲಖೀಂಪುರದಲ್ಲಿ ನಡೆದಿದೆ. ಇದರಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರನೇ ಭಾಗಿಯಾದ್ದರೂ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾ ಮಾಡಿಲ್ಲ. ಈ ಬಗ್ಗೆ ಒಂದು ಟ್ವೀಟ್ ಮಾಡಲಿಲ್ಲ. ಮನ್ ಕಿ ಬಾತ್ ಆಡಲಿಲ್ಲ. ಅವರಿಗೆ ರೈತರ ಬಗ್ಗೆ ಯಾವ ಕಾಳಜಿಯೂ ಇಲ್ಲ ಎಂದು ರಾಮಲಿಂಗಾರೆಡ್ಡಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಯುಪಿ ಹಿಂಸಾಚಾರ : ರೈತರ ಹತ್ಯೆ ಖಂಡಿಸಿ ಇಂದು ಮಾಹಾರಾಷ್ಟ್ರ ಬಂದ್ !

ಮುಂಬೈ: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ರೈತರ ಮೇಲಿನ ಹಿಂಸಾಚಾರವನ್ನು ಖಂಡಿಸಿ ಮಹಾರಾಷ್ಟ್ರದ ಮಹಾ ವಿಕಾಸ್ ಅಗಾಡಿ (MVA) ಮೈತಿ ಒಕ್ಕೂಟದಿಂದ ಸೋಮವಾರ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದೆ. ಅಂಗಡಿ ಮುಂಗಟ್ಟುಗಳು ಸೇರಿದಂತೆ ಬಹುತೇಕ ಎಲ್ಲವೂ ಸ್ವಯಂಪ್ರೇರಿತವಾಗಿ ಬಂದ್ ಆಗಲಿವೆ.

ಪ್ರತಿಭಟನಾ ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಅವರು ಕಾರ ಹರಿಸಿದ ಪರಿಣಾಮ ನಾಲ್ವರು ರೈತರು ಸೇರಿದಂತೆ 8 ಜನರ ಸಾವಿಗೆ ಕಾರಣವಾದ ಯುಪಿ ಸರ್ಕಾರದ ನಡೆಯನ್ನು ಖಂಡಿಸಿ ಮಹಾರಾಷ್ಟ್ರ ಸರ್ಕಾರ ಬಂದ್ ಗೆ ಕರೆ ನೀಡಿದೆ.

ಮಹಾರಾಷ್ಟ್ರದ ಶಿವಸೇನೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅಥವಾ ಎನ್‌ಸಿಪಿ ಪಕ್ಷಗಳನ್ನು ಒಳಗೊಂಡ ಮಹಾರಾಷ್ಟ್ರ ವಿಕಾಸ್ ಅಗಾಡಿ (MVA) ಸರ್ಕಾರ ಬಂದ್‌ಗೆ ಬೆಂಬಲ ನೀಡುತ್ತಿದೆ. ರಾಜ್ಯ ಸರ್ಕಾರದ ಮೂರು ಪಕ್ಷಗಳು ಸೇರಿ ಬಂದ್ ಘೋಷಿಸಿದ ಬಂದ್ ಯಶಸ್ವಿಯಾಗಿ ನಡೆಯುತ್ತಿದೆ.

“ರೈತರನ್ನು ಬೆಂಬಲಿಸುವಂತೆ ನಾನು ಮಹಾರಾಷ್ಟ್ರದ 12 ಕೋಟಿ ಜನರನ್ನು ವಿನಂತಿಸುತ್ತೇನೆ. ಬೆಂಬಲ ಎಂದರೆ ನೀವೆಲ್ಲರೂ ಬಂದ್‌ಗೆ ಕೈಜೋಡಿಸಿ ಮತ್ತು ಒಂದು ದಿನದ ಮಟ್ಟಿಗೆ ನಿಮ್ಮ ಕೆಲಸವನ್ನು ನಿಲ್ಲಿಸಿ” ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿದ್ದರು.

ಅಗತ್ಯ ಸೇವೆಗಳಿಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ, ಅದರ ಹೊರತಾಗಿ ಎಲ್ಲ ಅಂಗಡಿ ಮುಂಗಟ್ಟು ಮತ್ತು ಸೇವೆಗಳನ್ನು ಬಂದ್ ಮಾಡಲಾಗುವುದು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಥವಾ ದಿನಸಿ ಮಾರುಕಟ್ಟೆಯನ್ನೂ ಕೂಡ ಮುಚ್ಚಲಾಗುವುದು ಎಂದು ರಾಜ್ಯ ಸರ್ಕಾರವೇ ಹೇಳಿದೆ.

“ಕೊರೊನಾ ವೈರಸ್‌ ಸೋಂಕು ಕಾರಣದಿಂದಾಗಿ ಲಾಕ್‌ಡೌನ್‌ ಮಾಡಿದ ಹಿನ್ನೆಲೆಯಿಂದ ಈಗಾಗಲೇ ನಮ್ಮ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಈ ಕಾರಣದಿಂದಾಗಿ ನಾವು ಈಗ ಬಂದ್‌ಗೆ ಬೆಂಬಲ ನೀಡುವುದಿಲ್ಲ” ಎಂದು ಮಹಾರಾಷ್ಟ್ರ ವ್ಯಾಪಾರಿಗಳ ಸಂಘವು ಬಂದ್ ಗೆ ವಿರೋಧ ವ್ಯಕ್ತಪಡಿಸಿದೆ.