ನವದೆಹಲಿ(16-11-2020): ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಜಾಮೀನು ಅರ್ಜಿಯನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಪತ್ರಕರ್ತರ ಪರವಾಗಿ ವಾದಿಸುತ್ತಾ, ಎಫ್ಐಆರ್ ನಲ್ಲಿ ಅವರ ವಿರುದ್ಧ ಯಾವುದೇ ಅಪರಾಧವನ್ನು ಬಹಿರಂಗಪಡಿಸುವುದಿಲ್ಲ. ಅವರು ಅಕ್ಟೋಬರ್ 5 ರಿಂದ ಜೈಲಿನಲ್ಲಿದ್ದಾರೆ. ನಾವು ಪತ್ರಕರ್ತರನ್ನು ಭೇಟಿಯಾಗಲು ಅನುಮತಿ ಕೇಳುತ್ತಾ ಮ್ಯಾಜಿಸ್ಟ್ರೇಟ್ ಬಳಿ ಹೋದಾಗ ಅವರು ಜೈಲಿಗೆ ಹೋಗಿ ಎಂದು ಹೇಳಿದ್ದಾರೆ ಎಂದು ಸಿಬಲ್ ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಸೋಮವಾರ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಜೆಐ ಎಸ್ಎ ಬಾಬ್ಡೆ ಯುಪಿ ಸರ್ಕಾರಕ್ಕೆ ನೋಟಿಸ್ ನೀಡಲಾಗುತ್ತಿದೆ ಎಂದು ಹೇಳಿದರು. ಈ ವಿಷಯ ಶುಕ್ರವಾರ ಮತ್ತೆ ವಿಚಾರಣೆಗೆ ಬರಲಿದೆ.
ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಬಂಧನದ ವಿರುದ್ಧ ಕೇರಳ ಪತ್ರಕರ್ತರ ಒಕ್ಕೂಟದ ಮನವಿಯನ್ನು ಆಲಿಸಲು ಕೂಡ ಸುಪ್ರೀಂ ಕೋರ್ಟ್ ಒಪ್ಪಿದೆ. ಆದರೆ, ಅಲಹಾಬಾದ್ ಹೈಕೋರ್ಟ್ಗೆ ಏಕೆ ಮನವಿ ಸಲ್ಲಿಸಲಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಭೀಕರ ಸಾಮೂಹಿಕ ಅತ್ಯಾಚಾರದಿಂದ ಮೃತಪಟ್ಟ ದಲಿತ ಮಹಿಳೆಯ ಕುಟುಂಬವನ್ನು ಭೇಟಿಯಾಗಲು ಹಥ್ರಾಸ್ ಗ್ರಾಮಕ್ಕೆ ತೆರಳುತ್ತಿದ್ದ ಸಿದ್ದೀಕ್ ಕಪ್ಪನ್ ಸೇರಿದಂತೆ ಮೂವರನ್ನು ಯುಪಿ ಪೊಲೀಸರು ಬಂಧಿಸಿದ್ದರು.