ನವದೆಹಲಿ(01-02-2021): ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾನೂನುಗಳ ರಚನೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಇತರರಿಂದ ಪ್ರತಿಕ್ರಿಯೆ ಕೇಳಿದೆ.
ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠ, ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷ ಹರಡುವ, ನಕಲಿ ಸುದ್ದಿಗಳನ್ನು ಬಿತ್ತರಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ವಕೀಲ ವಿನೀತ್ ಜಿಂದಾಲ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಕೇಂದ್ರಕ್ಕೆ ನೊಟೀಸ್ ನೀಡಿದೆ.
ಈಗಾಗಲೇ ಬಾಕಿ ಇರುವ ಟಿವಿ ಮಾಧ್ಯಮಗಳು, ಪತ್ರಿಕೆ ಮತ್ತು ಇತರೆ ಸಾಮಾಜಿಕ ಜಾಲಗಳ ವಿರುದ್ಧದ ದೂರುಗಳನ್ನು ಇತ್ಯರ್ಥಗೊಳಿಸಲು ‘ಮಾಧ್ಯಮ ಟ್ರಿಬ್ಯೂನಲ್’ ರಚಿಸಬೇಕೆಂಬ ಮನವಿಯನ್ನು ಕೂಡ ಅರ್ಜಿಯಲ್ಲಿ ಸೇರಿಸಲಾಗಿದೆ.