ಬೆಂಗಳೂರು(01-10-2020): ವಿಧಾನ ಪರಿಷತ್ನಲ್ಲಿ ಅಂಗೀಕಾರವಾಗದೆ ಬಾಕಿ ಉಳಿದಿರುವ ಮೂರು ವಿವಾದಿತ ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆ, ಕೈಗಾರಿಕಾ ವಿವಾದಗಳು ಮತ್ತು ಕಾನೂನುಗಳ ತಿದ್ದುಪಡಿ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರ ತನ್ನ ಬದ್ಧತೆಯಿಂದ ಹಿಂದೆ ಸರಿಯಬಾರದು ಎಂದು ಸುಗ್ರೀವಾಜ್ಞೆ ಮೂಲಕ ಮಸೂದೆಗಳನ್ನು ಜಾರಿಗೆ ತರಲು ನಿರ್ಣಯಿಸಲಾಗಿದೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.
3 ಮಸೂದೆಗಳ ವಿರುದ್ಧ ವ್ಯಾಪಕವಾಗಿ ಪ್ರತಿಭಟನೆ ನಡೆದಿದ್ದವು. ಪ್ರತಿ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಮಸೂದೆಗಳನ್ನು ಸದನದಲ್ಲಿ ವಿರೋಧಿಸಿದ್ದವು. ಇದೀಗ ಜನರ ವಿರೋಧದ ಮಧ್ಯೆ ಸುಗ್ರಿವಾಜ್ಞೆ ಮೂಲಕ ಮಸೂದೆ ಜಾರಿಗೆ ಸರಕಾರ ಮುಂದಾಗಿದೆ.