ಶಿಮ್ಲಾ:(13/10/2020); 2010ರಂದು ರೊಹ್ತಾಂಗ್ ಸುರಂಗಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಡಿಗಲ್ಲು ಹಾಕುವ ವೇಳೆ ಹಾಕಿದ್ದ ಶಿಲಾಫಲಕವನ್ನು ತೆಗೆದುಹಾಕಲಾಗಿದೆ ಎಂದು ಹಿಮಾಚಲ ಪ್ರದೇಶ ಕಾಂಗ್ರೆಸ್ ಆರೋಪಿಸಿದೆ.
ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರಿಗೆ ಈ ಬಗ್ಗೆ ಪತ್ರ ಬರೆದಿರುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಕುಲ್ದೀಪ್ ಸಿಂಗ್ ಠಾಕೂರ್, ‘2010 ಜೂ.28ರಂದು ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಲ್ ಹಾಗೂ ಕೇಂದ್ರ ಸಚಿವ ವೀರ್ಭದ್ರ ಸಿಂಗ್ ಅವರ ಸಮ್ಮುಖದಲ್ಲಿ ಸೋನಿಯಾ ಗಾಂಧಿ ಅವರು ಯೋಜನೆಗೆ ಅಡಿಗಲ್ಲು ಹಾಕಿದ್ದರು. ಆದರೆ, ಅ.3ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೂ ಮುನ್ನ ಇದನ್ನು ಕಿತ್ತು ಹಾಕಲಾಗಿದೆ. ಈ ಶಿಲಾಫಲಕವನ್ನು 15 ದಿನದೊಳಗಾಗಿ ಸರ್ಕಾರ ಅಲ್ಲಿಯೇ ಅಳವಡಿಸದೇ ಇದ್ದಲ್ಲಿ ರಾಜ್ಯವ್ಯಾಪಿ ಮುಷ್ಕರ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಘಟಕವು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಆದರೆ, ಇದುವರೆಗೆ ಎಫ್ ಐ ಆರ್ ದಾಖಲಾಗಿಲ್ಲ.