ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟ ಸಿಡಿಯಲ್ಲಿರುವ ಯುವತಿ ಇಂದು ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ. ಎಸ್.ಐ.ಟಿ.ಯಾರ ಪರವಾಗಿದೆ? ಯಾರನ್ನು ರಕ್ಷಿಸುತ್ತಿದೆ? ಎಂದು ಯುವತಿ ವಿಡಿಯೋ ಮೂಲಕ ಪ್ರಶ್ನಿಸಿದ್ದಾರೆ.
‘ನನಗೆ ಮೊದಲು ನನ್ನ ಅಪ್ಪ-ಅಮ್ಮ ಸುರಕ್ಷತೆ ಮುಖ್ಯ, ನನ್ನ ಅಪಹರಣ ಆಗಿದೆ ಎಂದು ನನ್ನ ವಿರುದ್ಧ ಅವರು ದೂರು ಕೊಡಲು ಸಾಧ್ಯವೇ ಇಲ್ಲ. ಏಕೆಂದರೆ ಅವರಿಗೆ ನನ್ನ ಮೇಲೆ ನಂಬಿಕೆ ಇದೆ, ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ ಎಂಬುದು ಅವರಿಗೆ ಗೊತ್ತಿದೆ. ನನ್ನ ಅಪ್ಪ-ಅಮ್ಮ ಸುರಕ್ಷಿತವಾಗಿರಬೇಕು ಎಂಬುದನ್ನು ಯುವತಿ ಹೇಳಿದ್ದಾರೆ.
ನನಗಾದ ಅನ್ಯಾಯಕ್ಕೆ ನ್ಯಾಯ ಕೇಳಿ ಈ ಹಿಂದೆ ನಾನು ಒಂದು ವಿಡಿಯೋ ಮಾಡಿ ಅದನ್ನು ಕಮಿಷನರ್ ಕಚೇರಿ ಹಾಗೂ ಎಸ್ಐಟಿ ಅವರಿಗೆ ಕಳುಹಿಸಿದ್ದೆ, ಅಂದರೆ ಮಾರ್ಚ್ 13ರಂದು, ಆದರೆ ಮರುದಿನವೇ ತರಾತುರಿಯಲ್ಲಿ ರಮೇಶ್ ಜಾರಕಿಹೊಳಿ ದೂರು ಕೊಟ್ಟಿದ್ದಾರೆ. ಆದಾದ ಅರ್ಧ ಗಂಟೆ ನಂತರ ನನ್ನ ವಿಡಿಯೋ ಹರಿಬಿಟ್ಟಿದ್ದಾರೆ. ಇಲ್ಲಿ ಎಸ್ಐಟಿ ಯಾರ ಪರವಾಗಿದೆ? ಯಾರಿಗೆ ರಕ್ಷಣೆ ಮಾಡುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಯುವತಿ ಕೇಳಿದ್ದಾರೆ.
ಅದಕ್ಕಿಂತ ಮುಂಚೆ ನಾನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ರಮೇಶ್ ಕುಮಾರ್ ಅವರಿಗೆ ಹಾಗೂ ಇತರೆ ಮಹಿಳಾ ಸಂಘಟನೆಗಳಿಗೆ ಇಷ್ಟೇ ಕೇಳಿಕೊಳ್ಳುವುದು ನನ್ನ ಅಪ್ಪ – ಅಮ್ಮನಿಗೆ ಭದ್ರತೆ ಕೊಡಿ, ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳಿ ಎಂದು ಯುವತಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.