ಬೆಂಗಳೂರು(18/11/2020): ಸರ್ಕಾರ ಮರಾಠ ಅಭಿವೃದ್ದಿ ಪ್ರಾಧಿಕಾರ ಘೋಷಿಸಿ ಅನಗತ್ಯವಾಗಿ ಕನ್ನಡಿಗರನ್ನು ಕೆರಳಿಸುವ ಮೂರ್ಖತನ ತೋರಿದೆ. ಇದರಿಂದಾಗಿ ರಾಜ್ಯದ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟಾದಲ್ಲಿ ಅದಕ್ಕೆ ಮುಖ್ಯಮಂತ್ರಿಗಳೇ ಹೊಣೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಗಡಿಭಾಗದಲ್ಲಿ ಕನ್ನಡ ಮತ್ತು ಮರಾಠಿಗರ ನಡುವೆ ಆಗಾಗ ಸಂಘರ್ಷ ನಡೆದರೂ, ರಾಜ್ಯಾದ್ಯಂತ ಎರಡೂ ಸಮುದಾಯಗಳು ಸೌಹಾರ್ದತೆಯಿಂದ ಬದುಕುತ್ತಿವೆ. ಇದಕ್ಕೆ ಧಕ್ಕೆ ತರುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
‘ಯಾವುದೇ ವೈಜ್ಞಾನಿಕ ಅಧ್ಯಯನಗಳಿಲ್ಲದೆ ಜಾತಿ ಆಧಾರಿತ ನಿಗಮ-ಪ್ರಾಧಿಕಾರ ಸ್ಥಾಪನೆ ಸಮಾಜ ವಿರೋಧಿ ಮಾತ್ರವಲ್ಲ, ಪ್ರಜಾಪ್ರಭುತ್ವ ವಿರೋಧಿ ತೀರ್ಮಾನ ಕೂಡ ಹೌದು. ಚುನಾವಣೆಗಳನ್ನು ಸಾಧನೆಯ ಬಲದಿಂದ ಗೆಲ್ಲಲಾಗದ ರಾಜ್ಯದ ಮತಿಹೀನ ಬಿಜೆಪಿ ಸರ್ಕಾರ ಇಂತಹ ಅಗ್ಗದ ತಂತ್ರ-ಕುತಂತ್ರಗಳನ್ನು ಮಾಡಿ ಸಮಾಜವನ್ನು ಒಡೆಯಲು ಹೊರಟಿದೆ’ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.