ಶಿವಮೊಗ್ಗ: ಇಲ್ಲಿನ ಸೈನ್ಸ್ ಕಾಲೇಜು ಮೈದಾನದಲ್ಲಿ ನಡೆದ ರೈತ ಮಹಾ ಪಂಚಾಯತಿಗೆ ರೈತರ ಮಹಾಪೂರವೇ ಹರಿದುಬಂದಿದೆ.
ಕರುನಾಡಿನ ಮತ್ತು ಇಡೀ ದಕ್ಷಿಣ ಭಾರತದ ಮೊತ್ತಮೊದಲ ರೈತ ಮಹಾಪಂಚಾಯತಿಗೆ ರಾಷ್ಟ್ರ ಮಟ್ಟದ ರೈತ ನಾಯಕರೂ ಭಾಗವಹಿಸಿ, ರೈತರಲ್ಲಿ ನವೋಲ್ಲಾಸ ತುಂಬಿದರು. ಡಾ.ದರ್ಶನ್ ಪಾಲ್, ರಾಕೇಶ್ ಟಿಕಾಯತ್ ಮತ್ತು ಯುದುವೀರ್ ಸಿಂಗ್ ಮಂತಾದವರು ಸಮ್ಮೇಳನದಲ್ಲಿ ಮಾತನಾಡಿ ರೈತ ಹೋರಾಟದ ಯಶಸ್ವಿಯ ಬಗೆಗೆ ವಿವರಿಸಿದರು.
“ಈ ಮಣ್ಣಿಗೆ ನಾನು ನಮನ ಸಲ್ಲಿಸಲು ಬಯಸುತ್ತೇನೆ. ಏಕೆಂದರೆ ಬಸವಣ್ಣ ಮತ್ತು ಟಿಪ್ಪುಗೆ ಜನ್ಮಕೊಟ್ಟ ಭೂಮಿ ಇದು, ಇಲ್ಲಿನ ಜನರಿಗೆ ನಮನ ಸಲ್ಲಿಸಲು ಬಯಸುತ್ತೇನೆ. ಏಕೆಂದರೆ ತುಂಗಾ ಮೂಲ ಉಳಿಸಿ ಹೋರಾಟದ ಮೂಲಕ ದಿಟ್ಟ ಹೋರಾಟ ಮಾಡಿದವರು, ನಿಮಗೆ ನಮನ.” ಎಂದು ದರ್ಶನ್ ಪಾಲ್ ಹೇಳಿದರು.
ಅಲ್ಲದೇ 32 ವರ್ಷಗಳಿಂದ ಎಂಎಸ್ಪಿಗಾಗಿ ಹೋರಾಡುತ್ತಿದ್ದೇವೆ. ರೈತರ ಆತ್ಮಹತ್ಯೆಗಳ ವಿರುದ್ಧ ನಾವು ಹೋರಾಡುತ್ತಿರುವಾಗ ಕೋವಿಡ್ ಕಾಲದಲ್ಲಿ ಕೇಂದ್ರ ಸರ್ಕಾರ ಈ ಕರಾಳ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದೆ. ಇದರ ವಿರುದ್ಧ ಕಳೆದ 8 ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದೇವೆ. ನಾವು ಇಡೀ ಪಂಜಾಬ್ ಬಂದ್ ಮಾಡಿದ್ದೇವೆ. ರೈಲು ಸೇವೆ ಸ್ಥಗಿತಗೊಳಿಸಿದ್ದೇವೆ. ರಿಲಾಯನ್ಸ್ ಮತ್ತು ಎಸ್ಸಾರ್ ಪೆಟ್ರೋಲ್ ಬಂಕ್ಗಳನ್ನು ಬಂದ್ ಮಾಡಿಹೋರಾಟ ಮಾಡಿದ್ದೇವೆ ಎಂದು ಅವರು ಯಶಸ್ವೀ ರೈತ ಹೋರಾಟದ ಬಗೆಗೆ ವಿವರಿಸಿದರು.
ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಸುಳ್ಳು ಹೇಳುತ್ತಾ, ರೈತ ಕಾನೂನುಗಳನ್ನು ಸಮರ್ಥಿಸುತ್ತಿದ್ದಾರೆ. ಇದು ರೈತರ ಭೂಮಿಯನ್ನು ಕಿತ್ತುಕೊಂಡು ಕಾರ್ಪರೇಟ್ ಕುಳಗಳಿಗೆ ಕೊಡುವ ಹುನ್ನಾರವಾಗಿದ್ದು, ಈ ಕರಾಳ ಕಾನೂನುಗಳನ್ನು ಹಿಂದೆಗೆಯದಿದ್ದರೆ, ಬಿಜೆಪಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲಿದ್ದೇವೆ ಎಂದು ತಾಕೀತು ಮಾಡಿದರು.