ಚೆನ್ನೈ(19-11-2020): ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚಿನ್ನಮ್ಮ ಶಶಿಕಲಾ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಸಿದ್ದತೆ ನಡೆಯುತ್ತಿದೆ. ಚುನಾವಣೆ ಮೊದಲು ಶಶಿಕಲಾ ಬಿಡುಗಡೆಯಾದರೆ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರು 2017ರ ಫೆ.15ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆದರೆ 10 ಕೋಟಿ ಹತ್ತು ಸಾವಿರ ದಂಡವನ್ನು ಶಶಿಕಲಾ ಪಾವತಿಸಿದರೆ ಅವರು 2021ರ ಜ. 27ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಅದರಂತೆ ಶಶಿಕಲಾ ಕುಟುಂಬಸ್ಥರು ಈಗಾಗಲೇ 10 ಕೋಟಿ ಹತ್ತು ಸಾವಿರ ದಂಡವನ್ನು ಪಾವತಿ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕುಗಳ ಕಾಯ್ದೆಯಡಿಯಲ್ಲಿ ಪಡೆದ ಮಾಹಿತಿಯಲ್ಲಿ ಬಹಿರಂಗವಾಗಿದೆ. ಜೈಲು ಅಧಿಕಾರಿಗಳು ಕೂಡ ದಂಡ ಪಾವತಿಸಿರುವ ಬಗ್ಗೆ ಖಚಿತಪಡಿಸಿದ್ದಾರೆ.
ಶಶಿಕಲಾ ಪರ ವಕೀಲ ಎನ್. ರಾಜಸೆಂತೂರ್ ಪಾಂಡ್ಯನ್ ಮಾತನಾಡಿ, ದಂಡವನ್ನು ನ್ಯಾಯಾಲಯವು ಸ್ವೀಕರಿಸಿದೆ. ಆ ಬಗ್ಗೆ ಜೈಲು ಆಡಳಿತಕ್ಕೆ ಅಧಿಕೃತ ಮಾಹಿತಿಯನ್ನೂ ನೀಡಲಾಗಿದೆ. ಇದರಿಂದಾಗಿ ಶಶಿಕಲಾ ಬಿಡುಗಡೆ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ತಮಿಳುನಾಡನ್ನು ಆಳ್ವಿಕೆ ಮಾಡುವಷ್ಟು ಪ್ರಭಾವಿಯಾಗಿದ್ದ ಶಶಿಕಲಾ, ತಾನು ಮಾಡಿದ್ದ ಅಕ್ರಮಕ್ಕೆ ಮುಖ್ಯಮಂತ್ರಿ ಹುದ್ದೆಗೇರುವ ಕೊನೇ ಕ್ಷಣದಲ್ಲಿ ಜೈಲು ಪಾಲಾಗಿದ್ದರು. ಇದರಿಂದಾಗಿ ಜೈಲಿಗೆ ತೆರಳುವ ವೇಳೆ ಜಯಲಲಿತಾ ಸಮಾಧಿ ಬಳಿ ತೆರಳಿ ಶಪಥ ಮಾಡಿದ್ದ ಶಶಿಕಲಾ ಜೈಲಿನಿಂದ ಬಂದು ಮತ್ತೆ ಪ್ರತೀಕಾರ ತೀರಿಸುವ ಶಪಥ ಮಾಡಿದ್ದರು. ಇದೀಗ 3ವರ್ಷಗಳ ಜೈಲು ಶಿಕ್ಷೆ ಬಳಿಕ ಚಿನ್ನಮ್ಮ ಬಿಡುಗಡೆಯಾಗುತ್ತಿದ್ದು, ಯಾವ ರೀತಿ ತಮಿಳುನಾಡು ರಾಜಕೀಯವನ್ನು ನಿಯಂತ್ರಿಸುತ್ತಾರೆ ಎನ್ನುವುದು ಕಾದು ನೋಡಬೇಕಿದೆ.