ಕೋಲ್ಕತಾ (18-12-2020): ಭಾರತೀಯ ಜನತಾ ಪಕ್ಷದ ನಾಯಕರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಬಿಜೆಪಿ ಸಂಸದ ಕೈಲಾಶ್ ವಿಜಯವರ್ಗಿಯಾ, ಅರ್ಜುನ್ ಸಿಂಗ್ ಮತ್ತು ಇತರ ಇಬ್ಬರು ಬಿಜೆಪಿ ನಾಯಕರ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು 2021 ರ ಜನವರಿಯಲ್ಲಿ ವಿಚಾರಣೆಯ ಮುಂದಿನ ದಿನಾಂಕದವರೆಗೆ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಉನ್ನತ ನ್ಯಾಯಾಲಯವು ಸೂಚಿಸಿದೆ.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠದ ಮುಂದೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು ತಮ್ಮ ವಿರುದ್ಧ “ಸುಳ್ಳು ಎಫ್ಐಆರ್” ದಾಖಲಿಸಲಾಗಿದೆ ಎಂದು ಹೇಳಿ ರಕ್ಷಣೆ ಕೋರಿ ಮನವಿಯನ್ನು ಸಲ್ಲಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಜಕೀಯ ಚಟುವಟಿಕೆಗಳನ್ನು ನಡೆಸದಂತೆ ತಡೆಯಲು ರಾಜ್ಯ ಸರ್ಕಾರವು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ನಾಲ್ಕು ಬಿಜೆಪಿ ಮುಖಂಡರು ಸಲ್ಲಿಸಿದ ನಾಲ್ಕು ಪ್ರತ್ಯೇಕ ಮನವಿಗಳಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಿಂದ ಸುಪ್ರೀಂ ಕೋರ್ಟ್ ಉತ್ತರ ಕೋರಿದೆ.