ನವದೆಹಲಿ(22-10-2020) ಸರಿಯಾದ ವೇತನ ಮತ್ತು ಇತರ ಸವಲತ್ತುಗಳು ಸಿಗದೇ ಸೌದಿಯಿಂದ ತಾಯ್ನಾಡಿಗೆ ಮರಳಿದ ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುತ್ತೇವೆ ಎಂದು ಕೇಂದ್ರ ಸರಕಾರ ಹೇಳಿದೆ. ಕೇಂದ್ರ ವಿದೇಶಾಂಗ ಇಲಾಖೆಯು ಈ ಬಗ್ಗೆ ಕಾರ್ಯೋನ್ಮುಖವಾಗುವ ಭರವಸೆ ನೀಡಿದೆಯಲ್ಲದೇ, ಈ ಬಗ್ಗೆ ಹೆಚ್ಚಿನ ವಿವರ ಪಡೆಯಲು ಸೌದಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಅದು ಹೇಳಿಕೊಂಡಿದೆ.
ಕೊರೋನಾ ಸಮಯದಲ್ಲಿ ಸೌದಿಯಲ್ಲಿನ ಹಲವು ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ಚಾರ್ಟೆಡ್ ವಿಮಾನಗಳ ಮೂಲಕ ಭಾರತಕ್ಕೆ ಕಳುಹಿಸಿದ್ದವು. ಹೀಗೆ ಕಳುಹಿಸುವ ಸಮಯದಲ್ಲಿ ಕೆಲವು ಕಂಪೆನಿಗಳು ವೇತನವನ್ನೋ, ಪಿಎಫ್ ಹಣವನ್ನೋ ಕೊಟ್ಟಿರಲಿಲ್ಲ. ಇದರ ವಿರುದ್ಧ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಇದಕ್ಕೆ ಪರಿಹಾರ ಕೊಡಬೇಕೆಂದು ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು.
ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಬಿಹಾರ, ಒಡಿಶಾ ರಾಜ್ಯಗಳಿಂದ ಇನ್ನೂರ ಎಂಭತ್ತಕ್ಕೂ ಹೆಚ್ಚು ಅನಿವಾಸಿಗಳಿಂದ ದೂರುಗಳು ಬಂದಿದ್ದವು. ಈ ಎಲ್ಲಾ ದೂರುಗಳನ್ನು ಕ್ರೋಢೀಕರಿಸಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೂ, ಕೇಂದ್ರ ವಿದೇಶಾಂಗ ಇಲಾಖೆಗೂ, ಸೌದಿಯಲ್ಲಿನ ಭಾರತೀಯ ದೂತವಾಸ ಕಛೇರಿಗೂ ಕಳುಹಿಸಲಾಗಿತ್ತು. ಜೊತೆಗೆ ಕೇರಳ ಹೈಕೋರ್ಟಿಗೂ ಸಲ್ಲಿಸಲಾಗಿತ್ತು. ಇದೀಗ ಈ ದೂರನ್ನು ಪರಿಗಣಿಸಬೇಕು ಕೇಂದ್ರ ಸರಕಾರಕ್ಕೆ ನ್ಯಾಯಾಲಯ ಅದೇಶಿಸಿದೆ.
ದೂರು ನೀಡಿದ ಇನ್ನೂರ ಎಂಭತ್ತಾರು ಸೌಲಭ್ಯ ವಂಚಿತ ಮಂದಿಯಲ್ಲಿ ಕೌಶಲ್ಯರಹಿತ ಉದ್ಯೋಗಿಗಳಿಂದ ಹಿಡಿದು ಮೆನೇಜರ್ ಹುದ್ದೆಯ ವರೆಗಿನ ವಿವಿಧ ಸ್ತರಗಳಲ್ಲಿರುವ ಉದ್ಯೋಗಿಗಳೂ ಸೇರಿದ್ದಾರೆ. ಹಾಗೆಯೇ ಮೂರು ವರ್ಷಗಳಿಂದ ಮೂವತ್ತು ವರ್ಷಗಳಷ್ಟು ಸೇವಾವಧಿ ಹೊಂದಿರುವ ಉದ್ಯೋಗಿಗಳೂ ಇದ್ದಾರೆ. ವಿಶೇಷವಾಗಿ ಸೌದಿಯಲ್ಲಿನ ನಾಸಿರ್ ಅಲ್ ಹಾಜರಿ ಎಂಬ ಖಾಸಗಿ ಕಂಪೆನಿಯ ವಿರುದ್ಧವೇ ಹೆಚ್ಚಿನ ದೂರುಗಳು ಬಂದಿದೆಯೆನ್ನಲಾಗಿದೆ.
ವಿದೇಶಾಂಗ ಇಲಾಖೆಯು ಈ ವಿಷಯದಲ್ಲಿ ಸಕ್ರಿಯವಾಗದಿದ್ದರೆ ನಾವು ಸೌದಿಯಲ್ಲಿರುವ ಲೇಬರ್ ಇಲಾಖೆಗೆ ದೂರು ಸಲ್ಲಿಸಲಿರುವುದಾಗಿಯೂ ಸಂಬಂಧಪಟ್ಟ ವಕೀಲರು ತಿಳಿಸಿದ್ದಾರೆ.