ಜಿದ್ದಾ(19-11-2020): ಭಾರತದಿಂದ ಸೌದಿ ಅರೇಬಿಯಾಗೆ ವೈಮಾನಿಕ ಪ್ರಯಾಣಕ್ಕೆ ಹೇರಲಾದ ನಿಷೇಧವನ್ನು ಹಿಂತೆಗೆಯಲು ನಿರ್ಧರಿಸಲಾಗಿದೆ. ಇದರ ಮೊದಲ ಹಂತವಾಗಿ ಭಾರತದಿಂದ ಆರೋಗ್ಯ ಕಾರ್ಯಕರ್ತರಿಗೂ, ಅವರ ಕುಟುಂಬಿಕರಿಗೂ ನೇರವಾಗಿ ಸೌದಿ ಅರೇಬಿಯಾಗೆ ವಿಮಾನ ಪ್ರಯಾಣ ನಡೆಸಬಹುದಾಗಿದೆ.
ಕೊರೋನಾ ವ್ಯಾಪಕವಾಗಿರುವ ಕಾರಣ ನೀಡಿ ಭಾರತ, ಅರ್ಜೆಂಟೈನಾ ಮತ್ತು ಬ್ರೆಜಿಲ್ ದೇಶಗಳಿಂದ ನೇರವಾಗಿ ಸೌದಿ ಅರೇಬಿಯಾಗೆ ಪ್ರವೇಶಿಸಲು ನಿಷೇಧ ವಿಧಿಸಲಾಗಿತ್ತು. ಇದರಿಂದಾಗಿ ಕೊರೋನಾ ಪೂರ್ವದಲ್ಲಿ ಭಾರತಕ್ಕೆ ಬಂದಿದ್ದ ಅನಿವಾಸಿಗಳಿಗೆ ಮತ್ತೆ ಉದ್ಯೋಗಕ್ಕೆ ಹಾಜರಾಗಲಾಗದೇ ತೊಂದರೆ ಎದುರಾಗಿತ್ತು. ಇದೀಗ ಬಂದ ಸೌದಿ ಸಿವಿಲ್ ಏವಿಯೇಷನ್ ಅಥಾರಿಟಿಯ ಹೊಸ ಸುತ್ತೋಲೆ ಅನಿವಾಸಿಗಳಿಗೊಂದು ಶುಭ ಸುದ್ದಿಯಾಗಿದೆ.
ಸೌದಿಯಲ್ಲಿರುವ ಭಾರತೀಯ ರಾಯಭಾರಿ ಕಛೇರಿಯ ಅಧಿಕಾರಿಗಳು, ಸೌದಿ ಸಿವಿಲ್ ಏವಿಯೇಷನ್ ಆಥಾರಿಟಿಯ ಅಧಿಕಾರಿಗಳೊಂದಿಗೆ ನಡೆಸಿದ ನಿರಂತರ ಮಾತುಕತೆಯ ಫಲವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಮೂಲಗಳು ತಿಳಿಸಿವೆ.