ಜಿದ್ದಾ(4-11-2020): ಮುಂದಿನ ವರ್ಷ ಮಾರ್ಚ್ ತಿಂಗಳಿನಿಂದ ಸೌದಿ ಅರೇಬಿಯಾದಲ್ಲಿ ಈ ವರೆಗೂ ಇದ್ದ ಕಫಾಲ ಎಂದು ಕರೆಯಲಾಗುವ ಪ್ರಾಯೋಜಕತ್ವ ನೀತಿಗೆ ತಿಲಾಂಜಲಿ ನೀಡುವುದಾಗಿ ಸೌದಿ ಕಾರ್ಮಿಕ ಸಚಿವಾಲಯ ಘೋಷಿಸಿದೆ.
ಇದರ ಪ್ರಕಾರ ಉದ್ಯೋಗಿಗೆ ಸೌದಿಯಿಂದ ಹೊರ ಹೋಗಲು, ಪುನರ್ ಪ್ರವೇಶ ಪಡೆಯಲು ಮತ್ತು ಉದ್ಯೋಗ ಬದಲಾಯಿಸಲು ಉದ್ಯೋಗದಾತನ ಅನುಮತಿಯ ಅಗತ್ಯವಿಲ್ಲ. ಆದರೆ ಆನ್ಲೈನ್ ಮೂಲಕ ಉದ್ಯೋಗದಾತನಿಗೆ ಈ ಎಲ್ಲಾ ಮಾಹಿತಿಗಳು ಸಕಾಲದಲ್ಲಿ ಲಭ್ಯವಾಗುವುದು ಅದೇ ವೇಳೆ ಉದ್ಯೋಗ ಕರಾರುಗಳನ್ನು ಎರಡೂ ಕಡೆಯವರೂ ಪಾಲಿಸಬೇಕಾಗುತ್ತದೆ. ಇಲ್ಲದಿದ್ದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.
ಈ ವರ್ಷ ಸೌದಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆ, 2030 ರ ಗುರಿಯಿರಿಸಿ ಸೌದಿ ತರುವ ಅಮೂಲಾಗ್ರ ಬದಲಾವಣೆ, ವಿವಿಧ ಕಂಪೆನಿಗಳ ಕಡೆಯಿಂದ ಬಂದ ದೂರುಗಳು ಇತ್ಯಾದಿ ಹಿನ್ನೆಲೆಗಳು ಈ ಕಾನೂನು ಬದಲಾವಣೆಗೆ ಕಾರಣವಾಗಿದೆ. ಕಾರ್ಮಿಕ ಶೋಷಣೆಯನ್ನು ತಡೆಗಟ್ಟುವ ಸಲುವಾಗಿ ಹೊಸ ನೀತಿ ಜಾರಿಯಾಗಲಿದ್ದರೂ ಕೂಡಾ ಸೌದಿಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಸ್ವದೇಶೀಕರಣ ಪ್ರಕ್ರಿಯೆಗೂ ಇದು ಸಹಕಾರಿಯಾಗಲಿದೆಯೆಂಬ ಭೀತಿಯೂ ಅನಿವಾಸಿ ಭಾರತೀಯರನ್ನು ಕಕಾಡುತ್ತಿದೆ.