ಜಿದ್ದಾ(21-12-2020): ಅಂತರಾಷ್ಟ್ರೀಯ ರಸ್ತೆ ಸಾರಿಗೆ, ನೌಕಾಯಾನ, ವಿಮಾನಯಾನಗಳು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಯುರೋಪಿಯನ್ ದೇಶಗಳಲ್ಲಿ ನವೀನ ಮಾದರಿಯ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಈ ಲಾಕ್ಡೌನ್ ಘೋಷಿಸಲಾಗಿದೆ.
ಸೌದಿಯ ಆರೋಗ್ಯ ಸಚಿವಾಲಯದ ಸೂಚನೆಯಂತೆ ಗೃಹ ಸಚಿವಾಲಯವು ಒಂದು ವಾರ ಕಾಲ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ನಿಷೇಧ ಹೇರಿದ್ದು, ಅಗತ್ಯವೆಂದು ಕಂಡು ಬಂದರೆ, ಇದು ಇನ್ನಷ್ಟು ಕಾಲ ಮುಂದುವರಿಯುವ ಸಾಧ್ಯತೆಯೂ ಇದೆ.
ಆದರೆ, ಆರೋಗ್ಯ ಕಾರ್ಯಕರ್ತರ ಪ್ರಯಾಣ ಸೇರಿದಂತೆ ಕೆಲವು ವಿಶೇಷ ಪ್ರಕರಣಗಳಿಗೆ ರಿಯಾಯಿತಿ ದೊರಕಲಿದೆ. ಅದೇ ರೀತಿ ಸದ್ಯ ಸೌದಿಯಲ್ಲಿರುವ ವಿದೇಶೀ ವಿಮಾನಗಳು ದೇಶದಿಂದ ಹೊರಹೋಗಲು ಅನುಮತಿಯಿದೆ. ರೂಪಾಂತರಗೊಂಡ ಕೊರೋನಾ ವೈರಸ್ ಪತ್ತೆಯಾಗದೇ ಇರುವ ದೇಶಗಳಿಗಿರುವ ಸರಕು ಸಾರಿಗೆ ಈ ನಿಷೇಧದಿಂದ ಮುಕ್ತವಾಗಿದೆ.
ಕಳೆದ ಮೂರು ತಿಂಗಳಲ್ಲಿ ಯುರೋಪ್ ದೇಶಗಳಿಂದ ಬಂದ ಪ್ರಯಾಣಿಕರು ಕೊರೋನಾ ಪರೀಕ್ಷೆಗೆ ಒಳಗಾಗಬೇಕು. ಡಿಸೆಂಬರ್ ಎಂಟರ ಬಳಿಕ ಬಂದವರು ಈಗಲೇ ಕ್ವಾರಂಟೈನ್ ಪಾಲಿಸಬೇಕಲ್ಲದೇ, ಅಂಥವರಿಗೆ ಪ್ರತಿ ಐದು ದಿನಗಳಿಗೊಮ್ಮೆ ಕೋವಿಡ್ ತಪಾಸಣೆ ಕಡ್ಡಾಯ ಇತ್ಯಾದಿ ನಿಯಮಾವಳಿಗಳನ್ನು ಹೊರಡಿಸಲಾಗಿದೆ.