ಸರ್ಕಾರವೊಂದು ಜೀವಂತವಾಗಿದ್ದರೆ,ವಿರೋಧ ಪಕ್ಷದ ನಾಯಕರು ಪತ್ರ ಬರೆದ ಕೂಡಲೇ ಮಾಹಿತಿ ನೀಡಬೇಕು: ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಸರ್ಕಾರವೊಂದು ಜೀವಂತವಾಗಿದ್ದರೆ, ಅದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ವಿರೋಧ ಪಕ್ಷದ ನಾಯಕರು ಪತ್ರ ಬರೆದ ಕೂಡಲೇ ಮಾಹಿತಿ ನೀಡುತ್ತಿತ್ತು. ಕೋವಿಡ್ ಎರಡನೇ ಅಲೆ ಪ್ರಾರಂಭವಾದ ಮೇಲೆ ಸರ್ಕಾರಕ್ಕೆ ೧೨ ಪತ್ರಗಳನ್ನು ಬರೆದಿದ್ದೇನೆ. ಇವುಗಳಲ್ಲಿ ಒಂದಕ್ಕಾದರೂ ಉತ್ತರ ನೀಡಿದ್ದೀರಾ? ಇದು ಬೇಜವಾಬ್ದಾರಿಯ ಪರಮಾವಧಿ ಅಲ್ಲವೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕೊರೋನ ಸಾಂಕ್ರಾಮಿಕವನ್ನು ನಿರ್ವಹಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆಯಲು ಉದ್ದೇಶಿಸಿ ದಿನಾಂಕ ೧೭-೫-೨೧ ರಂದು ರಾಜ್ಯದ ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು.
ಝೂಮ್ ತಂತ್ರಾಂಶದ ಮೂಲಕ ಹಾಜರಾಗಿ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿತ್ತು. ಮೂರು ದಿನಗಳ ನಂತರ ಮುಖ್ಯ ಕಾರ್ಯದರ್ಶಿಗಳು ಪತ್ರ ಬರೆದು ವಿರೋಧ ಪಕ್ಷದ ನಾಯಕರು ಸಭೆ ನಡೆಸಬಾರದು. ಬೇಕಿದ್ದರೆ ಪತ್ರ ಬರೆದು ಮಾಹಿತಿ ಪಡೆಯಬಹುದಾಗಿ ಮುಖ್ಯಮಂತ್ರಿಗಳು ಅನುಮೋದನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ ಎಂದಿದ್ದಾರೆ.

ಆಸ್ಪತ್ರೆ, ಬೆಡ್‌ಗಳು, ವೆಂಟಿಲೇಟರ್, ಆಕ್ಸಿಜನ್ನು, ಅಗತ್ಯ ಔಷಧಗಳು, ಆಂಬ್ಯುಲೆನ್ಸುಗಳು, ವೈದ್ಯಕೀಯ ಸಿಬ್ಬಂದಿ, ವ್ಯಾಕ್ಸಿನ್ ಮುಂತಾದವುಗಳು ಸಮರ್ಪಕವಾಗಿ ಸಿಗದೆ ಜನ ಅನಾಥರಂತೆ ಬೀದಿ ಬೀದಿಗಳಲ್ಲಿ ಮರಣ ಹೊಂದುತ್ತಿದ್ದಾರೆ. ಕಡೆಗೆ ಕೋವಿಡ್ ಪರಿಸ್ಥಿತಿ ನಿಯಂತ್ರಿಸಲು ಸರ್ಕಾರದಿಂದಾಗದು ಎಂದು ತಿಳಿದ ನ್ಯಾಯಾಲಯಗಳು ಕ್ರಿಯಾಶೀಲವಾಗಬೇಕಾಯಿತು. ಸರ್ಕಾರ ಜೀವಂತವಾಗಿದ್ದರೆ ಕೋರ್ಟುಗಳೇಕೆ ಕಾರ್ಯರಂಗಕ್ಕೆ ಇಳಿಯಬೇಕಾಗುತ್ತಿತ್ತು?
ವಿರೋಧ ಪಕ್ಷವಾಗಿ ನಾವು ಸರ್ಕಾರ ಮಾಡಬೇಕಾದ ಕೆಲಸಗಳನ್ನು ಮಾಡುತ್ತಿದ್ದೇವೆ. ನಮ್ಮ ಶಾಸಕರು, ಮುಖಂಡರುಗಳು ಆಂಬ್ಯುಲೆನ್ಸು, ಔಷಧಿ, ಆಹಾರದ ಕಿಟ್ಟುಗಳು, ಆಸ್ಪತ್ರೆ ವ್ಯವಸ್ಥೆ ಮುಂತಾದವುಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂಥ ಸಂದರ್ಭದಲ್ಲಿ ನಾನು ಸರ್ಕಾರ ಏನು ಮಾಡಿದೆ? ಏನು ಮಾಡುತ್ತಿದೆ? ಎಂದು ಮಾಹಿತಿ ಸಂಗ್ರಹಿಸಲು ಉದ್ದೇಶಿಸಿದರೆ ಅದನ್ನು ನಿರಾಕರಿಸುತ್ತೀರಿ. ೨೦೦೯ ರಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದಾಗಲೂ ನೀವು ಇದನ್ನೇ ಮಾಡಿದಿರಿ. ವಿರೋಧ ಪಕ್ಷಗಳಿಲ್ಲದಿದ್ದರೆ ಭ್ರಷ್ಟಾಚಾರ, ಆಲಸ್ಯ, ನಿಷ್ಕ್ರಿಯತೆ ಮತ್ತು ಜನ ವಿರೋಧಿ ಚಟುವಟಿಕೆಗಳನ್ನು ನಿರಾತಂಕವಾಗಿ ಮುಂದುವರೆಸಬಹುದು ಎಂಬುದು ನಿಮ್ಮ ಸಿದ್ದಾಂಥ. ಅದಕ್ಕಾಗಿ ವಿರೋಧ ಪಕ್ಷಗಳನ್ನು ನಿರ್ಬಂಧಿಸಲು ಹೊರಟಿದ್ದೀರಿ. ಹಿಂದೆ ಸುತ್ತೋಲೆಗಳನ್ನು ಹೊರಡಿಸಿದಾಗ ತಂತ್ರಜ್ಞಾನ ಸಂಬಂಧಿ ಅನುಕೂಲಗಳಿರಲಿಲ್ಲ. ಹಾಗಾಗಿ ಸಭೆ ಕರೆದು ಮಾಹಿತಿ ಪಡೆಯಬೇಕಾಗಿತ್ತು. ಆದರೆ ಕಳೆದ ಎರಡು ಮೂರು ವರ್ಷಗಳಿಂದ ಝೂಮ್, ಗೂಗಲ್ ಮುಂತಾದ ಅಪ್ಲಿಕೇಶನ್ನುಗಳ ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದಿದ್ದಾರೆ.

ನನಗೆ ಅಧಿಕಾರಿಗಳ ಕಾರ್ಯವೈಖರಿಗಳ ಕುರಿತು ಪರಿಶೀಲನೆ ನಡೆಸಲು, ನಿರ್ದೇಶನಗಳನ್ನು ನೀಡುವ ಉದ್ದೇಶವಿಲ್ಲ. ಅಷ್ಟರಮಟ್ಟಿಗಿನ ಸಾಂವಿಧಾನಿಕ ಅರಿವು ಇದೆ. ಕೇವಲ ಮಾಹಿತಿ ಪಡೆಯುವುದಷ್ಟೆ ನನ್ನ ಉದ್ದೇಶ. ಮಾಹಿತಿ ನೀಡಬೇಕಾದ ನಮೂನೆಯನ್ನು ಸಿದ್ಧಪಡಿಸಿ ಅಧಿಕಾರಿಗಳಿಗೆ ನೀಡಲಾಗಿದೆ. ಆ ನಮೂನೆಯನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಭರ್ತಿಮಾಡುವಷ್ಟು ತಿಳುವಳಿಕೆ ಇರುವವರೂ ಕಡಿಮೆ ಇದ್ದಾರೆ. ಕಳೆದ ಎರಡು ವರ್ಷಗಳಿಂದ ನಾವು ಕೇಳಿರುವ ಮಾಹಿತಿಯೊಂದಾದರೆ ಅಧಿಕಾರಿಗಳು ಇನ್ನೊಂದು ಮಾಹಿತಿ ನೀಡಿದ್ದಾರೆ. ಈ ಗೊಂದಲಗಳಿಗೆ ಅವಕಾಶ ನೀಡಬಾರದೆಂಬ ಉದ್ದೇಶದಿಂದಲೇ ನೇರವಾಗಿ ಮುಖತಃ ಮಾಹಿತಿ ಪಡೆಯಲು ಉದ್ದೇಶಿಸಿದ್ದೇನೆ. ಒಂದು ಜಿಲ್ಲೆಗೆ ಅರ್ಧ ಗಂಟೆಯಿಂದ ಒಂದು ಗಂಟೆಯಷ್ಟು ಮಾತ್ರ ಕಾಲ ನಿಗದಿಪಡಿಸಿದ್ದೇನೆ ಎಂದು ತಿಳಿಸಿದ್ದಾರೆ.

ಆದ್ದರಿಂದ ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಝೂಮ್ ಮೂಲಕ ಹಾಜರಾಗಿ ಮಾಹಿತಿ ನೀಡಲು ನಿರ್ದೇಶನ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಜನರ ಹಿತಾಸಕ್ತಿಯನ್ನು ರಕ್ಷಿಸಲು ಯಾವುದೇ ರೀತಿಯ ಸಂಸದೀಯ, ಸಂವಿಧಾನಾತ್ಮಕ ಸಂಘರ್ಷಕ್ಕೆ ಬೇಕಾದರೂ ಇಳಿಯಲು ಸಿದ್ಧವಾಗಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಕೂಡಲೇ ನಮ್ಮ ಶಾಸನಾತ್ಮಕ ಅಧಿಕಾರಗಳನ್ನು, ಜವಾಬ್ಧಾರಿಗಳನ್ನು ಬಳಸಿ ಜನರ ಹಿತ ರಕ್ಷಿಸಲು ಅನುವು ಮಾಡಿಕೊಡಬೇಕೆಂದು ಸಿದ್ದರಾಮಯ್ಯ ನವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು