ಬೆಂಗಳೂರು(15-12-2020): ಸಾರಿಗೆ ನೌಕರರ ಸಮಸ್ಯೆಗಳನ್ನು ಬಗೆಗೆ ಪ್ರಸ್ತಾವನೆ ಸಲ್ಲಿಸುವುದಕ್ಕಾಗಿಯೇ ಪ್ರತ್ಯೇಕ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ವಿವಿಧ ವಿಭಾಗಗಳ ಪ್ರಮುಖರನ್ನು ಸೇರಿಸಿ, ರಾಜ್ಯ ಸರಕಾರವು ಇಂತಹ ಒಂದು ಸಮಿತಿಯನ್ನು ರಚಿಸಿದೆ.
ಸಮಿತಿಯು ಸಾರಿಗೆ ನೌಕರರ ಸಮಸ್ಯೆಗಳನ್ನು ಆಲಿಸಲಿದೆ. ಮತ್ತು ಸರಕಾರಕ್ಕೆ ಸೂಕ್ತ ವರದಿ ಸಲ್ಲಿಸಲಿದೆ. ಕೆ.ಎಸ್.ಆರ್.ಟಿ.ಸಿ ಯ ಎಂಡಿಯಾಗಿರುವ ಶಿವಯೋಗಿಯವರನ್ನು ಅಧ್ಯಕ್ಷರನ್ನಾಗಿಸಿದ ಸಮಿತಿಯಲ್ಲಿ, ಬಿಎಂಟಿಸಿ, ವಾಯುವ್ಯ, ಈಶಾನ್ಯ ಸಾರಿಗೆ ಸಂಸ್ಥೆಗಳ ಎಂಡಿ ಹಾಗೂ ಪ್ರಮುಖ ಸಿಬ್ಬಂದಿಗಳು ಒಳಗೊಳ್ಳುತ್ತಾರೆ. ಜೊತೆಗೆ ಪರಿಸರ ವಿಭಾಗದ ನಿರ್ದೇಶಕರೂ ಇದರ ಅಂಗವಾಗಿರುತ್ತಾರೆ.
ನೌಕರರ ವಿಮಾ ಪಾಲಿಸಿ, ಅವರಿಗೆ ಎದುರಾಗುವ ಕಿರುಕುಳ ತಡೆಯುವ ಬಗ್ಗೆ ಮುಂತಾದ ವಿಚಾರಗಳನ್ನೂ ಸಮಿತಿಯು ತನ್ನ ವರದಿಯಲ್ಲಿ ಸೇರಿಸಲಿದೆ. ಸಾರಿಗೆ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ನೌಕರರು ಹೂಡಿದ ಮುಷ್ಕರವನ್ನು ಕೈ ಬಿಡಲು ಸರಕಾರವು ಅವರ ಒಂಭತ್ತು, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸರಕಾರದಿಂದ ಈ ವಿಶೇಷ ಸಮಿತಿಯು ರಚನೆಗೊಂಡಿದೆ.