– ಬಾಲಾಜಿ ಕುಂಬಾರ, ಲೇಖಕರು ಬೀದರ್
ಬಹುತೇಕ ಜನರಿಗೆ ಸರ್ಕಾರಿ ಶಾಲೆಗಳು ಕಂಡರೆ ಸಾಕು, ಅಸಡ್ಡೆ, ನಿರ್ಲಕ್ಷ್ಯ, ಬರೀ ನೆಗೆಟಿವ್ ಯೋಚನೆ, ಇನ್ನೂ ಗ್ರಾಮೀಣ ಭಾಗದ ಜನರಿಗೂ ಅಷ್ಟೇ, ಸರ್ಕಾರಿ ಶಾಲೆಗಳಲ್ಲಿ ಈಗ ಏನೂ ಉಳಿದಿಲ್ಲ, ಅವು ಈಗ ‘ನಾಮಕೇವಾಸ್ತೆ’ಗೆ ಮಾತ್ರ ನಡೆಯುತ್ತಿವೆ ಎನ್ನುವ ಮಾಮೂಲಿ ಮಾತುಗಳು ಕೇಳುತ್ತೇವೆ.
ಹೌದು, ಆದರೆ ಇಲ್ಲೊಂದು ಶಾಲೆಯಿದೆ, ಇಲ್ಲೊಬ್ಬರು ಶಿಕ್ಷಕರಿದ್ದಾರೆ, ಈ ಶಾಲೆಗೆ ಒಮ್ಮೆ ಭೇಟಿ ನೀಡಿದರೆ ಸಾಕು, ನಮ್ಮೊಳಗಿನ ‘ಕಾನ್ವೆಂಟ್ ಪ್ರೀತಿ’ ತಂತಾನೆ ಇಲ್ಲವಾಗುತ್ತದೆ. ಸಮಕಾಲೀನ ಸಮಾಜಕ್ಕೆ ಅನುಗುಣವಾಗಿ ಮಕ್ಕಳಿಗೆ ಅವಶ್ಯವಾಗಿರುವ ಸ್ಮಾರ್ಟ್ ಶಿಕ್ಷಣ ಒದಗಿಸುವ ಸದುದ್ದೇಶದಿಂದ ಸಿದ್ಧವಾದ ಈ ಶಾಲೆ ರಾಜ್ಯದ ‘ಫಸ್ಟ್ ಸ್ಮಾರ್ಟ್ ಪ್ಲಸ್ ಸ್ಕೂಲ್ ‘ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹೌದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಮೌಲ್ಯಯುತ ಗುಣಮಟ್ಟ ಶಿಕ್ಷಣ ನೀಡುವುದು ತುಂಬಾ ಅನಿವಾರ್ಯತೆ ಇದೆ. ಬಹುತೇಕರು ಅದನ್ನು ಕೇವಲ ಖಾಸಗಿ ಶಾಲೆಗಳಿಂದ ಮಾತ್ರ ನಿರೀಕ್ಷಿಸುತ್ತಾರೆ. ಇದು ಬರೀ ಭ್ರಮೆ ಅಲ್ಲದೇ ಮತ್ತೇನೂ ಅಲ್ಲ. ಸರ್ಕಾರಿ ಶಾಲೆಗಳು ಕಮ್ಮಿಯಿಲ್ಲ ಎನ್ನುವ ಮಟ್ಟಿಗೆ ಬೆಳೆಸಲು ನಿರ್ಧರಿಸಿದ್ದಾರೆ,ಈ ದಿಸೆಯಲ್ಲಿ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ನೀಡುತ್ತಾ ಸೈ ಎನಿಸಿಕೊಂಡಿದ್ದಾರೆ.
ಮಾಸ್ಟರ್ ಮೈಂಡ್ ಶಿಕ್ಷಕ ವೀರಣ್ಣ:
ಈ ಮಾದರಿ ಶಾಲೆ ಬೇರೆಲ್ಲೂ ಇಲ್ಲ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಸಿರಿನಿಂದ ಕಂಗೊಳಿಸುವ ಶಾಲೆಯ ಅಂಗಳ, ಒಳಗಡೆ ಪ್ರವೇಶಿಸಿದರೆ ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ತಾರ, ಸ್ಮಾರ್ಟ್ ಕ್ಲಾಸ್ ರೂಮ್, ಟಿ.ವಿ. ಕಂಪ್ಯೂಟರ್, ಕಲರ್ ಕಲರ್ ಕುರ್ಚಿ, ಟೇಬಲ್, ಗ್ರೀನ್ ಬೋರ್ಡ್, ಹೈಟೆಕ್ ಶೌಚಾಲಯ, ನ್ಯೂ ಡ್ರೆಸ್ ಕೋಡ್ ಇತ್ಯಾದಿ…ಎಲ್ಲವೂ ಡಿಜಿಟಲ್ ಮಯ, ಅಷ್ಟಕ್ಕೂ ಈ ಸಣ್ಣ ಊರಿನ ಸರ್ಕಾರಿ ಶಾಲೆಯನ್ನು ರಾಜ್ಯದ ನಂ ಒನ್ ಶಾಲೆಯಾಗಿ ರೂಪಿಸಿದವರು ಮಾಸ್ಟರ್ ಮೈಂಡ್ ವೀರಣ್ಣ ಮಡಿವಾಳರ ಎನ್ನುವ ಪ್ರಧಾನ ಶಿಕ್ಷಕ. ಹೌದು ಆಶ್ಚರ್ಯ ಎನಿಸಿದರೂ ಸತ್ಯ.
ಶಿಕ್ಷಕ ವೀರಣ್ಣ ಮಡಿವಾಳರ ಅವರು ಮೂಲತಃ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕುಲಕೇರಿ ಗ್ರಾಮದವರು. ಕೃಷಿ ಕುಟುಂಬದಲ್ಲಿ ಜನಿಸಿದ ವೀರಣ್ಣ ಅವರು ಬಡತನವನ್ನು ತುಂಬಾ ಹತ್ತಿರದಿಂದ ಕಂಡು ಅನುಭವಿಸಿದವರು. ಇವರು ಹಾವೇರಿ ಜಿಲ್ಲೆ ಸವಣೂರು ತಾಲೂಕಿನಲ್ಲಿ 3 ವರ್ಷ, ಚಿಕ್ಕೋಡಿ ತಾಲೂಕಿನಲ್ಲಿ 6 ವರ್ಷ ಶಿಕ್ಷಕ ವೃತ್ತಿ ಸೇವೆ ಸಲ್ಲಿಸಿ ಸದ್ಯ ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಸಾಧನೆಯ ಶಿಖರ ತಲುಪಲು ಬಡತನ ಅಡಿಯಿಲ್ಲ ಎನ್ನುವ ಕನಸಿನೊಂದಿಗೆ ದಮನಿತರ ಧ್ವನಿಯಾಗಿ, ನೊಂದವರ ಬಾಳಿನ ಬೆಳಕಾಗಿ, ಬಡ ಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಜನಮೆಚ್ಚಿದ ಶಿಕ್ಷಕ, ಹಳ್ಳಿಯ ಬಡ ಮಕ್ಕಳಿಗೆ ಗುರುವಾಗಿ, ಆಶ್ರಯದಾತರಾಗಿ ಜ್ಞಾನಾರ್ಜನೆ ಮಾಡುತ್ತಿದ್ದಾರೆ.
ಸರ್ಕಾರ ಶಾಲೆಗಳು ಎಂದರೆ ಮುಗಿತು, ಶಿಕ್ಷಕರಿದ್ದರೆ ಮಕ್ಕಳಿರಲ್ಲ, ಮಕ್ಕಳಿದ್ದರೆ ಶಿಕ್ಷಕರಿರಲ್ಲ, ಮಕ್ಕಳು – ಶಿಕ್ಷಕರಿರುವ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಇಂಥ ಅವಸ್ಥೆಯಿಂದ ಇಂದಿನ ಬಹುತೇಕ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ ಎಂದು ಹೇಳಿದರು ತಪ್ಪಾಗಲಾರದು. ಇದನ್ನು ಗಮನಿಸಿದ ಶಿಕ್ಷಕ ವೀರಣ್ಣ ಅವರು ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಮೀರಿಸುವಂತೆ ಪ್ರಗತಿ ಕಾಣಬೇಕು ಎನ್ನುವ ಘನವಾದ ಉದ್ದೇಶ ಹೊಳೆಯಿತು. ಮುಂದೆ ವೀರಣ್ಣನವರು ‘ಸರ್ಕಾರಿ ಶಾಲೆ ನಮ್ಮ ಹೆಮ್ಮೆ’ ಎನ್ನುವ ಆನ್ಲೈನ್ ಅಭಿಯಾನ ಆರಂಭಿಸಿದರು.
ಮೊದಲಿಗೆ ತಮ್ಮ ಸಂಬಳದ 70 ಸಾವಿರ ಹಣದಿಂದ ಶಾಲೆಯ ಕಂಪೌಂಡ್ ನಿರ್ಮಿಸಿ ಅದಕ್ಕೆ ತಾವೇ ಸ್ವತಃ ಚಿತ್ರಗಳನ್ನು ಬಿಡಿಸಿ ಅಂದಗೊಳಿಸಿದ್ದಾರೆ. ಶಾಲೆಯ ದಿನನಿತ್ಯದ ಕಾರ್ಯಗಳನ್ನು ತಮ್ಮ ಫೇಸ್ಬುಕ್ ಜಾಲತಾಣದಲ್ಲಿ ಅಪಡೇಟ್ ಮಾಡತೊಡಗಿದರು. ಶಾಲೆಯ ಪ್ರಗತಿಯ ಕೆಲಸಗಳಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯ್ತು, ಹಲವು ಗೆಳೆಯರು, ದಾನಿಗಳು ನೆರವು ನೀಡಲು ಮುಂದಾದರು, ಎಲ್ಲರ ಸಪೋರ್ಟ್ ದಿಂದ ಮಕ್ಕಳ ಕಲಿಕೆಗೆ ಅಗತ್ಯವಾದ ಪೀಠೋಪಕರಣ ಹಾಗೂ ಪಾಠೋಪಕರಣಗಳ ವ್ಯವಸ್ಥೆಯಾಯ್ತು, ಹೀಗೆ ಶಾಲೆಯ ಒಳಾವರಣ ‘ಡಿಜಿಟಲ್ ಟಚ್’ ಪಡೆಯಿತು,ಈಗ ಕ್ಲಾಸ್ ರೂಮ್ ಗಳು ಫುಲ್ ಕಲರ್ ಕಲರ್ ದಿಂದ ಮಿಂಚುಸುತ್ತಿದೆ.
ಕಾನ್ವೆಂಟ್ ಮೀರಿಸುವ ಗುರಿ:
ಕೋಟ್ಯಾಧೀಶರ ಮಕ್ಕಳಿಗೆ ದೊರಕುವ ಶಿಕ್ಷಣ ಹಳ್ಳಿಯ ಸಾಮಾನ್ಯ ಬಡ – ಮಕ್ಕಳಿಗೂ ಸಿಗುವಂತೆ ಆಗಬೇಕು. ಸರ್ಕಾರಿ ಶಾಲೆಗಳು ಎಂದರೆ ನಮ್ಮೆಲ್ಲರ ಹೆಮ್ಮೆಯ ಕಲಿಕಾ ಕೇಂದ್ರಗಳೇ ಹೊರತು ಅವು ಮೂಗು ಮುರಿಯುವ ಕಲಿಕಾ ತಾಣಗಳಲ್ಲ, ನಾವೆಲ್ಲರೂ ಸಮ ಸಮಾಜ ಹಾಗೂ ಪ್ರಜಾಪ್ರಭುತ್ವ ದೇಶದವರು, ಇಲ್ಲಿ ಹಲವು ಜಾತಿ – ಧರ್ಮ – ಭಾಷೆಗಳಿವೆ, ನಾವು ಜಾತ್ಯತೀತರು, ಕಾನ್ವೆಂಟ್ ಶಾಲೆಗಳು ಶ್ರೇಷ್ಠ, ಸರ್ಕಾರಿ ಶಾಲೆಗಳು ಕನಿಷ್ಠ ಇಲ್ಲ. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ, ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಬೇಕು, ಆ ವಾತಾವರಣ ನಿರ್ಮಿಸುವ ಗುರಿ ನನ್ನದು, ನಮ್ಮ ಶಾಲೆ ಒಂದೇ ಅಲ್ಲ, ರಾಜ್ಯದ ಪ್ರತಿ ಸರ್ಕಾರಿ ಶಾಲೆಗಳು ಈ ದಿಸೆಯಲ್ಲಿ ಯೋಚಿಸಿ ಬೆಳವಣಿಗೆ ಹೊಂದಬೇಕು ಎಂಬುವುದೇ ನನ್ನ ಸದಾಶಯ ಎನ್ನುತ್ತಾರೆ ಶಿಕ್ಷಕ ವೀರಣ್ಣ ಮಡಿವಾಳರ.
ಈ ಶಾಲೆಯಲ್ಲಿ ಬರೀ ಎರಡು ಕೋಣೆಗಳು ಮಾತ್ರ ಇವೆ, ಅವೆರಡೂ ಈಗ ಫುಲ್ ಡಿಜಿಟಲ್ ಕ್ಲಾಸ್ ಗಳಾಗಿ ರೂಪಾಂತರ ಹೊಂದಿವೆ. ಶಿಕ್ಷಕ ವೀರಣ್ಣ ಅವರು ಒಬ್ಬ ಶಿಕ್ಷಕರಾಗಿಯೇ ಉಳಿದಿಲ್ಲ, ಅವರೊಬ್ಬ ಸೃಜನಶೀಲ ಬರಹಗಾರ, ಕವಿ ಕೂಡ ಆಗಿದ್ದಾರೆ, ಅಷ್ಟೇ ಅಲ್ಲ ಇವರೊಳಗೆ ಒಬ್ಬ ಅತ್ಯುತ್ತಮ ಚಿತ್ರಕಲಾವಿದ ಇರುವುದು ಅವರ ಸಕಲಕಲಾವಲ್ಲಭಕ್ಕೆ ಇನ್ನೊಂದು ಸಾಕ್ಷಿಯಾಗಿದೆ, ತಾವೇ ಸ್ವತಃ ಗೋಡೆಗಳ ಮೇಲೆ ಬಣ್ಣದ ಚಿತ್ತಾರ ಬಿಡಿಸಿ ಅಂದ ಹೆಚ್ಚಿಸಿದ್ದಾರೆ. ಶಾಲೆಯ ಮುಂದಿರುವ ಸಣ್ಣ ಮೈದಾನದಲ್ಲಿ ಕೈತೋಟ ನಿರ್ಮಿಸಿ,
ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ. ಮಕ್ಕಳಿಗೆ ತರಗತಿ ಕೋಣೆಯಲ್ಲಿ ಕುಳಿತುಕೊಳ್ಳಲು ಬಣ್ಣ ಬಣ್ಣದ ಕುರ್ಚಿಗಳು ಮತ್ತು ಟೇಬಲ್ ಗಳಿವೆ, ದೊಡ್ಡದಾದ ಟಿವಿ ಇದೆ, ಗ್ರೀನ್ ಬೋರ್ಡ್ ಮೂಲಕ ಬೋಧನೆ ಮಾಡ್ತಾರೆ, ಮಕ್ಕಳಿಗೆ ಪಾಠ ಕೇಳಲು ಬೋರ್ ಎನಿಸಿದಾಗ ಯೂಟ್ಯೂಬ್ ನಲ್ಲಿ ಟೀಚಿಂಗ್ ಕೊಡುವ ಸ್ಮಾರ್ಟ್ ಪ್ಲಸ್ ಕ್ಲಾಸ್ ವ್ಯವಸ್ಥೆ ಇಲ್ಲಿದೆ. ವಾರಕ್ಕೊಮ್ಮೆ ಯೋಗ ತರಬೇತಿ ನೀಡ್ತಾರೆ, ಕಂಪ್ಯೂಟರ್ ತರಬೇತಿ, ಜಾನಪದ ಗೀತ ಗಾಯನ, ಪದ್ಯ ರಚನೆ, ಹಾಡು, ಭಾಷಣ ಕಲೆ, ಆತ್ಮಸ್ಥೈರ್ಯ ತುಂಬುವ ಕಥಾ ವಾಚನ, ಮಕ್ಕಳಿಗೆ 4 ಜೋಡಿ ಕಲರ್ ಕಲರ್ ಸಮವಸ್ತ್ರ, ಮಕ್ಕಳಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯ..ಹೀಗೆ ಯಾವುದೇ ಕೊರತೆ ಇಲ್ಲದಂತೆ ಶಾಲಾ ಮಕ್ಕಳಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳು ಹೊಂದಿದೆ ಈ ಶಾಲೆ, ಈ ಹಿಂದೆ 76 ಮಕ್ಕಳು ಹೊಂದಿರುವ ಶಾಲೆಯಲ್ಲಿ ಇಂದು 120 ಮಕ್ಕಳು ಖುಷಿಯಿಂದ ಓದುತ್ತಿದ್ದಾರೆ.
ಶಾಲಾಭಿವೃದ್ಧಿಗೆ ಜಾಲತಾಣ ಬಳಕೆ:
ಈ ಶಾಲೆಯು ತನ್ನದೇ ಆದ ಪ್ರತ್ಯೇಕ ವೆಬ್ ಸೈಟ್ ಹೊಂದಿದೆ, ತಮ್ಮ ಶಾಲೆಗೆ ಸಂಬಂಧಿಸಿದ ಶಾಲಾ ಬೆಳವಣಿಗೆಯನ್ನು ವಿಡಿಯೋ, ಪೋಟೋ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ http://www.nannashale.in/klpsambedkarnidagundi ವೆಬ್ ಸೈಟ್ ನಲ್ಲಿ ಅಪಡೇಟ್ ಮಾಡುತ್ತಾರೆ. ಈ ಶಾಲೆ ವೆಬ್ ಸೈಟ್ ಹೊಂದಿರುವ ರಾಜ್ಯದ ಮೊದಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕವಿ ವೀರಣ್ಣ ಅವರ ಶಾಲೆಯ ಪ್ರಗತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಕಂಡು ಹಲವು ಸ್ನೇಹಿತರು, ಶಿಕ್ಷಣ ತಜ್ಞರು, ವಿದೇಶದ ಸ್ನೇಹಿತರು ಶಾಲೆಗೆ ಅವಶ್ಯವಾಗಿರುವ ಸಾಮಾಗ್ರಿಗಳನ್ನು ದೇಣಿಗೆ ನೀಡಿದ್ದಾರೆ. ಇನ್ನೂ ಹಲವು ದಾನಿಗಳು ಆರ್ಥಿಕ ನೆರವು ನೀಡಿದರೆ, ಮತ್ತೊಬ್ಬರು ದಾನಿಗಳು ಹೊಸ ಕೋಣೆ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ.
ಸೈನ್ಸ್ ಮ್ಯೂಸಿಯಂ ನಿರ್ಮಿಸುವ ಗುರಿ:
ವೃತ್ತಿಯಲ್ಲಿ ಶಿಕ್ಷಕನಾಗಿದ್ದರೂ ವೀರಣ್ಣ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಲವು ಕವನ ಸಂಕಲನ ಕೃತಿಗಳು ಮತ್ತು ನಾಟಕಗಳನ್ನು ರಚಿಸಿದ್ದಾರೆ. ವೀರಣ್ಣನವರ ‘ನೆಲದ ಕರುಣೆಯ ದನಿ’ ಕವನ ಸಂಕಲನಕ್ಕೆ ಚೊಚ್ಚಲ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದಿರುವ ರಾಜ್ಯದ ಮೊದಲಿಗರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಬೇಂದ್ರೆ ಗ್ರಂಥ ಬಹುಮಾನ, ಅಮ್ಮ ಪ್ರಶಸ್ತಿ ಸೇರಿದಂತೆ ಹಲವು ಗೌರವ, ಪ್ರಶಸ್ತಿಗಳು ಮುಡಿಗೇರಿಸಿಕೊಂಡಿರುವ ವೀರಣ್ಣನವರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳಿಗೆ ಭಾಜನರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅನೇಕ ಜನಪರ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಮ ಸಮಾಜಕ್ಕಾಗಿ ಮಿಡಿಯುವ ಬಹುಮುಖ ಪ್ರತಿಭಾವಂತ ಶಿಕ್ಷಕ ವೀರಣ್ಣ ಅವರಿಗೆ ಮಕ್ಕಳ ಪ್ರೀತಿಯೇ ಅವರ ಯಶಸ್ಸಿಗೆ ಮುನ್ನುಡಿಯಾಗಿದೆ.
ಮಕ್ಕಳು ಬರೀ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆ ಕಡೆಗೂ ಹೆಚ್ಚು ಆಸಕ್ತಿ ತೋರಬೇಕು, ಶಾಲೆಯ ವಾತಾವರಣ ಬದಲಾವಣೆ ಮಾಡಿದರೆ, ಮಕ್ಕಳ ಕೌಶಲ್ಯ ತಂತಾನೆ ಬದಲಾಗುತ್ತದೆ, ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಬರೀ ಅವಸ್ಥೆ ತುಂಬಿದರೆ ಶಾಲೆಯಲ್ಲಿ ಮಕ್ಕಳು ಹೇಗೆ ತಾನೇ ಓದಲು ಆಸಕ್ತಿ ತೋರುವರು? ಈಗ ನಮ್ಮ ಶಾಲೆಯ ವಾತಾವರಣ ಬದಲಾವಣೆ ಆಗಿದೆ, ಖಾಸಗಿ ಶಾಲೆಯ ಮಕ್ಕಳು ನಮ್ಮ ಶಾಲೆಗೆ ಬರುತ್ತಿದ್ದಾರೆ, ಪ್ರತಿವರ್ಷ ದಾಖಲಾತಿ ಹೆಚ್ಚುತ್ತಿದೆ, ಮಕ್ಕಳು ಕಲಿಕೆಯಲ್ಲಿ ಪ್ರಗತಿ ಸಾಧಿಸಿ ಸೈ ಎನಿಸಿಕೊಳ್ಳುತ್ತಿದ್ದಾರೆ. ಈಗ ಇಷ್ಟಾಗಿದೆ, ಇನ್ನೂ ನಮ್ಮ ಶಾಲೆಯಲ್ಲಿ ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ ಮತ್ತು ಭಾಷಾ ಪ್ರಯೋಗಾಲಯ ನಿರ್ಮಿಸುವ ಗುರಿಯಿದೆ ಎಂದು ಹೇಳುತ್ತಾರೆ.
ನಾವು ಬದಲಾಗೋಣ:
ಸರ್ಕಾರಿ ಶಾಲೆಗಳ ಬಗ್ಗೆ ನಮಗಿರುವ ಕೀಳರಿಮೆ ಮೊದಲು ತೊಲಗಬೇಕು, ಸರ್ಕಾರಿ ಶಾಲೆಯಲ್ಲಿ ಕಲಿತಿರುವ ಅದೆಷ್ಟೋ ಮಕ್ಕಳ ಸಾಧನೆ ನಮ್ಮ ಕಣ್ಮುಂದೆ ಇದೆ, ಕಾನ್ವೆಂಟ್ ವ್ಯಾಮೋಹ ಇಂಗ್ಲಿಷ್ ಪ್ರೇಮಕ್ಕೆ ಮಾರುಹೋಗಿ ನಾವು ಕನ್ನಡ ಹಾಗೂ ಸರ್ಕಾರಿ ಶಾಲೆಗಳನ್ನು ಕಡೆಗಣಿಸುತ್ತಿದ್ದೇವೆ. ಇಲ್ಲಿ ಯಾರು ದಡ್ಡರಲ್ಲ, ಪ್ರತಿಯೊಂದು ಮಗುವಿನಲ್ಲೂ ಅಮೂಲ್ಯವಾದ ಪ್ರತಿಭೆ ಅಡಗಿರುತ್ತದೆ, ಅದನ್ನು ಹೆಕ್ಕಿ ತರುವ ಕೆಲಸ ಶಿಕ್ಷಕರಾದವರು ಮಾಡಬೇಕಾಗಿದೆ, ನಮ್ಮ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಯಾವುದೇ ಕೊರತೆ ಇಲ್ಲ, ಶಾಲೆ ಬಿಟ್ಟ ನಂತರ ಮಕ್ಕಳು ಮನೆಗೆ ಹೋಗಲು ಒಲ್ಲೆನ್ನುತ್ತಾರೆ, ಒಂದು ಗಂಟೆ ಹೆಚ್ಚಿನ ಸಮಯ ಶಾಲೆಯಲ್ಲಿದ್ದು ಓದು – ಬರಹ ಮಾಡುತ್ತಾರೆ.
ಮಕ್ಕಳಿಗೆ ಅಭಿರುಚಿ, ಆಸಕ್ತಿ, ಆಕರ್ಷಣೆ, ಉಲ್ಲಾಸ, ಏಕಾಗ್ರತೆ, ಹೊಸತನ, ಮನೋರಂಜನೆ ಎಲ್ಲವೂ ನಾವು ನಿರ್ಮಾಣ ಮಾಡಬೇಕಷ್ಟೇ, ನಮ್ಮ ಶಾಲೆಯಲ್ಲಿ ನನ್ನ ಜೊತೆಗಿನ ಶಿಕ್ಷಕರೂ ನನ್ನ ಕಾರ್ಯದಲ್ಲಿ ಭಾಗಿಯಾಗಿ ಸಹಕಾರ ನೀಡುತ್ತಾರೆ. ಊರಿನ ಹಿರಿಯರು, ಪೋಷಕರು, ಸ್ನೇಹಿತರು ಸೇರಿದಂತೆ ಶಿಕ್ಷಣ ಇಲಾಖೆಯ ಹಲವರು ನನಗೆ ಮಾರ್ಗದರ್ಶನ ಮಾಡುತ್ತಾರೆ. ನಮ್ಮ ಶಾಲೆಯ ಬೆಳವಣಿಗೆಯನ್ನು ಕಂಡು ನಾಡಿನ ಸಾವಿರಾರು ಜನರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ, ಅನೇಕರು ಖುದ್ದು ಶಾಲೆಗೆ ಬಂದು ಕೊಟ್ಟು, ಬೆನ್ನು ತಟ್ಟಿದ್ದಾರೆ, ಅಷ್ಟೇ ಅಲ್ಲದೇ ಇಂದಿನ ಶಿಕ್ಷಣ ಸಚಿವರು ಕರೆಮಾಡಿ ಪ್ರೋತ್ಸಾಹದ ನುಡಿಗಳು ಹೇಳಿದ್ದಾರೆ, ಶಾಲೆಗೆ ಬೇಕಾಗುವ ಅಗತ್ಯ ನೆರವು ಕಲ್ಪಿಸುವ ಭರವಸೆ ಕೂಡ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ನನಗೆ ಮಕ್ಕಳೆಂದರೆ ಪ್ರಾಣಕ್ಕಿಂತ ಹೆಚ್ಚು, ಅವರ ಭವಿಷ್ಯ ನಿರ್ಮಾಪಕರಾದ ಶಿಕ್ಷಕರು ತಮ್ಮ ಕರ್ತವ್ಯ ಪ್ರಾಮಾಣಿಕವಾಗಿ ನಿಭಾಯಿಸಬೇಕಾಗಿದೆ, ಅದು ನಾನು ಮಾಡುತ್ತಿದ್ದೇನೆ ಎನ್ನುವ ಹೆಮ್ಮೆ ನನಗಿದೆ ಎನ್ನುತ್ತಾರೆ ಕವಿ ಶಿಕ್ಷಕ ವೀರಣ್ಣನವರು.
ಸ್ಮಾರ್ಟ್ ಶಾಲೆಯ ಪ್ರಧಾನ ಗುರು ವೀರಣ್ಣ ಮಡಿವಾಳವರ ಕಾರ್ಯಕ್ಕೆ ನಮದೊಂದು ಮೆಚ್ಚುಗೆ ಹಾಗೂ ಪ್ರೋತ್ಸಾಹವಿರಲಿ.