ನವದೆಹಲಿ(17-10-2020): ಗ್ಲೋಬಲ್ ಬರ್ಡೆನ್ ಆಫ್ ಡಿಸೀಸ್ (ಜಿಬಿಡಿ) ಅಧ್ಯಯನವು ಬೆಚ್ಚಿಬೀಳಿಸುವ ಅಂಶವನ್ನು ಬಹಿರಂಗಗೊಳಿಸಿದ್ದು, ವಾಯುಮಾಲಿನ್ಯ, ಅಧಿಕ ರಕ್ತದೊತ್ತಡ, ತಂಬಾಕು ಸೇವನೆ, ಕಳಪೆ ಆಹಾರ ಸೇವನೆಯಿಂದ ಭಾರತದಲ್ಲಿ 2019ರಲ್ಲಿ ಮರಣ ಪ್ರಮಾಣ ಹೆಚ್ಚಳವಾಗಿದೆ ಎಂದು ಹೇಳಿದೆ.
ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಈ ಕುರಿತು ಅಧ್ಯಯನ ವರದಿ ಪ್ರಕಟಿಸಲಾಗಿದೆ. ಸಂಶೋಧಕರ ಪ್ರಕಾರ ಭಾರತದಲ್ಲಿ ಜೀವಿತಾವಧಿ 1990ರಲ್ಲಿದ್ದ 59.6 ವರ್ಷಗಳಿಂದ 2019ರಲ್ಲಿ 70.8 ವರ್ಷಗಳಿಗೆ, ಕೇರಳದಲ್ಲಿ 77.3 ವರ್ಷಗಳಿಂದ ಉತ್ತರಪ್ರದೇಶದಲ್ಲಿ 66.9 ವರ್ಷಗಳಿಗೆ ಏರಿಕೆಯಾಗಿದೆ.
ಆದರೆ ಈ ಜೀವಿತಾವಧಿ ಹೆಚ್ಚಳವು ಜನರು ಅನಾರೋಗ್ಯ ಮತ್ತು ಅಂಗವೈಕಲ್ಯದಿಂದಾಗಿ ಅವರ ಜೀವಿತಾವಧಿಯ ಸರಿಯಾದ ಹೆಚ್ಚಳಕ್ಕೆ ಸಹಕಾರಿಯಾಗಿಲ್ಲ ಎಂದು ವರದಿ ತಿಳಿಸಿದೆ.
ಕಳೆದ 30 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಅನಾರೋಗ್ಯಕ್ಕೆ ಇಸ್ಕೋಪಿಕ್ ಹೃದ್ರೋಗ, ಸಿಒಪಿಡಿ, ಮಧುಮೇಹ ಮತ್ತು ಪಾರ್ಶ್ವವಾಯು ಕಾರಣವಾಗಿದೆ. 2019ರಲ್ಲಿ ಭಾರತದಲ್ಲಿ ಸಾವಿಗೆ ಕಾರಣವಾಗಿರುವ ಪ್ರಮುಖ ಐದು ಅಪಾಯಕಾರಿ ಅಂಶಗಳೆಂದರೆ ವಾಯು ಮಾಲಿನ್ಯ (ಅಂದಾಜು 1.67 ದಶಲಕ್ಷ ಸಾವುಗಳು), ಅಧಿಕ ರಕ್ತದೊತ್ತಡ (1.47 ಮಿಲಿಯನ್), ತಂಬಾಕು ಬಳಕೆ (1.23 ದಶಲಕ್ಷ), ಕಳಪೆ ಆಹಾರ (1.18 ಮಿಲಿಯನ್), ಮತ್ತು ಅಧಿಕ ರಕ್ತದ ಸಕ್ಕರೆ (1.12 ದಶಲಕ್ಷ) ಎಂದು ಸಂಶೋಧನಾ ವರದಿ ತಿಳಿಸಿದೆ.