ಡೆಹ್ರಾಡೂನ್(23-11-2020): ಅಂತರ್ಜಾತಿ ಮತ್ತು ಅಂತರ್ ಧರ್ಮದ ವಿವಾಹಗಳಿಗೆ 50,000ರೂ. ಪ್ರೋತ್ಸಾಹ ಧನ ನೀಡುವ ಟೆಹ್ರಿ ಗರ್ವಾಲ್ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯ ಪತ್ರಿಕಾ ಪ್ರಕಟಣೆಯ ಬಗ್ಗೆ ತನಿಖೆಗೆ ಉತ್ತರಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಆದೇಶಿಸಿದ್ದಾರೆ.
ಸಮಾಜ ಕಲ್ಯಾಣ ಅಧಿಕಾರಿಯ ಪತ್ರಿಕಾ ಪ್ರಕಟಣೆ ಬಗ್ಗೆ ತನಿಖೆ ನಡೆಸುವಂತೆ ಸಿಎಂ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರಾವತ್ ಅವರ ಮಾಧ್ಯಮ ಸಂಯೋಜಕ ದರ್ಶನ್ ಸಿಂಗ್ ರಾವತ್, ಘಟನೆಯನ್ನು ಸಿಎಂ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಿದ್ದಾರೆ.
ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ಐಕ್ಯತೆಯನ್ನು ಉತ್ತೇಜಿಸಲು ವಿವಿಧ ಸಮುದಾಯಗಳ ನಡುವಿನ ಅಂತರವನ್ನು ನಿವಾರಿಸಲು ಅಂತರ್ ಧರ್ಮ ಮತ್ತು ಅಂತರ್ಜಾತಿ ವಿವಾಹಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ನವೆಂಬರ್ 18 ರ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಪ್ರಕಟಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯು 50,000 ರೂ.ಗಳ ಪ್ರೋತ್ಸಾಹವನ್ನು ನೀಡುತ್ತದೆ ಮತ್ತು ಅಂತರ್ಜಾತಿ ಅಥವಾ ಅಂತರ್ ಧರ್ಮದ ದಂಪತಿಗಳು ಮದುವೆಯಾದ ಒಂದು ವರ್ಷದೊಳಗೆ ಸಮಾಜ ಕಲ್ಯಾಣ ಕಚೇರಿಯಲ್ಲಿ ಇದಕ್ಕೆ ಅರ್ಜಿಯನ್ನು ಸಲ್ಲಿಸಬೇಕಿದೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಸಿಎಂಗೆ ತಿಳಿದೇ ಇರಲಿಲ್ಲ.