ದೋಹಾ(28-10-2020): ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಅನಧಿಕೃತ ಏಜೆಂಟರಿಂದ ಮುಕ್ತಗೊಳಿಸಲು ಕತರ್ ಸರಕಾರ ಮುಂದಾಗಿದೆ. ಇದರ ಪ್ರಕಾರ ಅಧಿಕೃತ ಮಾನ್ಯತೆ ಇಲ್ಲದೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲೇರ್ಪಡುವವರು ಕಾನೂನು ಕ್ರಮಗಳನ್ನು ಎದುರಿಸಬೇಕಾಗುವುದು.
“ಅನಧಿಕೃತ ಏಜೆಂಟರಿಂದ ರಿಯಲ್ ಎಸ್ಟೇಟ್ ಉದ್ಯಮವು ನಷ್ಟ ಅನುಭವಿಸುತ್ತಿದೆ. ಇಂತಹ ಏಜೆಂಟರಿಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯಾವುದೇ ಅರ್ಹತೆ, ಅನುಭವ ಇರುವುದಿಲ್ಲ. ಕೆಲವರಿಗಂತೂ ಆ ಕ್ಷೇತ್ರದ ಪ್ರಾಥಮಿಕ ಜ್ಞಾನವೇ ಇರುವುದಿಲ್ಲ. ಕೆಲವರು ಮನೆ, ಜಾಗಗಳ ಮಾಲೀಕರಿಗೆ ತಿಳಿಸದೇ ವ್ಯವಹಾರ ಕುದುರಿಸುತ್ತಾರೆ. ಇವರಿಗೆ ಯಾವ ರೀತಿಯಲ್ಲಾದರೂ ಲಾಭಗಳಿಕೆಯೇ ಮುಖ್ಯವಾಗಿರುತ್ತದೆ.” ಎಂದು ರಿಯಲ್ ಎಸ್ಟೇಟ್ ತಜ್ಞರ ಅಭಿಮತ.
“ರಿಯಲ್ ಎಸ್ಟೇಟ್ ಬ್ರೋಕರೇಜ್ ಲಾ” ಜಾರಿಯಾದರೆ ವಿದೇಶೀ ಹೂಡಿಕೆದಾರರಿಗೆ ಸ್ಥಳೀಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆತ್ಮವಿಶ್ವಾಸ ಬರುವುದು. ಅವರಿಗೆ ಕಾನೂನು ಪ್ರಕಾರ, ಅಧಿಕೃತ ಮಧ್ಯವರ್ತಿಗಳ ಮೂಲಕ ವ್ಯವಹರಿಸಲು ಸಾಧ್ಯವಾಗುವುದು ಎಂದು ಈ ಕ್ಷೇತ್ರದ ತಜ್ಞರಾದ ಫೈಸಲ್ ಅಲ್ ದೂಸ್ರೀ ಹೇಳುತ್ತಾರೆ.
ನ್ಯಾಯಾಂಗದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ “ದಿ ಲೀಗಲ್ ಆ್ಯಂಡ್ ಜುಡೀಶಿಯಲ್ ಸ್ಟಡೀಸ್ ಸೆಂಟರ್” ರಿಯಲ್ ಎಸ್ಟೇಟ್ ಉದ್ಯಮದ ಬಗೆಗೆ ಒಂದು ಪ್ರತ್ಯೇಕ ಕೋರ್ಸನ್ನೇ ಆರಂಭಿಸಿದೆ. ಮುಂದಿನ ವಾರ ಇದರ ಮೊದಲ ಬ್ಯಾಚ್ ಪ್ರಾರಂಭವಾಗಲಿದ್ದು, ಅದರಲ್ಲಿ ಹತ್ತು ಮಂದಿ ಕತರಿ ಪ್ರಜೆಗಳಿದ್ದಾರೆ. ಈ ವಿಷಯದಲ್ಲಿ ಪದವಿಗಳಿಸಿದ ಬಳಿಕ, ಅವರಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು.
ಈ ಹೊಸ ಕಾನೂನು ಭಾರತೀಯರೂ ಸೇರಿದಂತೆ ಹಲವು ಅನಧಿಕೃತ ವಿದೇಶೀ ಮಧ್ಯವರ್ತಿಗಳ ವ್ಯವಹಾರಗಳಿಗೆ ಸಮಸ್ಯೆ ತಂದೊಡ್ಡಲಿದೆ.