ನವದೆಹಲಿ (11-02-2021): ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ನ ಮತ್ತು ಕೇಂದ್ರ ಸರಕಾರದ ನಡುವಿನ ಸಂಘರ್ಷ ಹೆಚ್ಚಾಗಿರುವ ಬೆನ್ನಲ್ಲೆ, ಕೇಂದ್ರೀಯ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಸಂಸತ್ತಿನಲ್ಲಿ ಮಾತನಾಡುತ್ತಾ, ಸಾಮಾಜಿಕ ಮಾಧ್ಯಮಗಳು ನಕಲಿ ಸುದ್ದಿಯನ್ನು ಪ್ರೋತ್ಸಾಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ನಿರ್ದಿಷ್ಟವಾಗಿ ಟ್ವಿಟರ್, ಫೇಸ್ಬುಕ್, ಯೂಟ್ಯೂಬ್ ಮತ್ತು ಲಿಂಕ್ಡ್ಇನ್ ಎಂದು ಹೆಸರಿಸಿರುವ ಕೇಂದ್ರ ಸಚಿವರು, ನಿಮಗೆ ಭಾರತದಲ್ಲಿ ಲಕ್ಷಾಂತರ ಅನುಯಾಯಿಗಳಿದ್ದಾರೆ, ನೀವು ಇಲ್ಲಿ ಹಣ ಸಂಪಾದಿಸಲು ಮುಕ್ತರಾಗಿದ್ದೀರಿ, ಆದರೆ ನೀವು ಭಾರತೀಯ ಸಂವಿಧಾನವನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳಿದರು.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳ ದುರುಪಯೋಗದ ಕುರಿತು ಮಾತನಾಡಿದ ರವಿಶಂಕರ್ ಪ್ರಸಾದ್, ನಾವು ಸಾಮಾಜಿಕ ಮಾಧ್ಯಮವನ್ನು ತುಂಬಾ ಗೌರವಿಸುತ್ತೇವೆ, ಅದು ಸಾಮಾನ್ಯ ಜನರಿಗೆ ಅಧಿಕಾರ ನೀಡಿದೆ. ಡಿಜಿಟಲ್ ಇಂಡಿಯಾ ಕಾರ್ಯಕ್ರಮದಲ್ಲಿ ಸಾಮಾಜಿಕ ಮಾಧ್ಯಮಕ್ಕೆ ದೊಡ್ಡ ಪಾತ್ರವಿದೆ. ಆದಾಗ್ಯೂ, ನಕಲಿ ಸುದ್ದಿ, ಹಿಂಸಾಚಾರವನ್ನು ಹರಡಲು ಸಾಮಾಜಿಕ ಮಾಧ್ಯಮವನ್ನು ದುರುಪಯೋಗಪಡಿಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಸಾದ್ ಹೇಳಿದ್ದಾರೆ.