ಉತ್ತರಪ್ರದೇಶ (02-10-2020): ಕಾಂಗ್ರೆಸ್ ಅಧಿನಾಯಕ, ಸಂಸದ ರಾಹುಲ್ ಗಾಂಧಿ ನಿನ್ನೆ ಹತ್ರಾಸ್ ಗೆ ತೆರಳುತ್ತಿದ್ದ ದಾರಿ ಮಧ್ಯೆ ಯಮುನಾ ಎಕ್ಸ್ ಪ್ರೆಸ್ ವೇ ಬಳಿ ನನ್ನ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆ ಬಳಿಕ ಪೊಲೀಸ್ ಅಧಿಕಾರಿ ರಾಹುಲ್ ಗಾಂಧಿಯ ಕಾಲರ್ ಪಟ್ಟಿ ಹಿಡಿದು ಎಳೆಯುತ್ತಿರುವ ದೃಶ್ಯದ ಪೋಟೋ ವೈರಲ್ ಆಗಿದೆ.
ಹತ್ರಾಸ್ ಗ್ಯಾಂಗ್ ರೇಪ್ & ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಹತ್ರಾಸ್ ಗೆ ನಿನ್ನೆ ತೆರಳುತ್ತಿದ್ದರು. ಯಮುನಾ ಎಕ್ಸ್ ಪ್ರೆಸ್ ವೇ ಬಳಿ ರಾಹುಲ್ ಗಾಂಧಿ ಕಾರು ಬರುತ್ತಿದ್ದಂತೆಯೇ ಪೊಲೀಸರು ತಡೆದಿದ್ದಾರೆ.
ಕಾರು ತಡೆಯುತ್ತಿದ್ದಂತೆಯೇ ಕಾರಿನಿಂದ ಇಳಿದು ನಡೆದುಕೊಂಡು ಕಾರ್ಯಕರ್ತರ ಬಳಿ ರಾಹುಲ್ ಗಾಂಧಿ ತೆರಳಿದ್ದಾರೆ. ಈ ವೇಳೆ ಪೊಲೀಸರು ರಾಹುಲ್ ಗಾಂಧಿಯನ್ನು ಅಡ್ಡಗಟ್ಟಿದ್ದು, ಪೊಲೀಸರು ಮತ್ತು ರಾಹುಲ್ ಗಾಂಧಿ- ಕೈ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.
ಬಳಿಕ ಮಾತನಾಡಿರುವ ರಾಹುಲ್ ಗಾಂಧಿ, ಉತ್ತರ ಪ್ರದೇಶ ಪೊಲೀಸರು ನನ್ನ ಮೇಲೆ ಲಾಠಿ ಚಾರ್ಜ್ ಮಾಡಿ ನೆಲಕ್ಕೆ ತಳ್ಳಿ ಹಾಕಿದ್ದಾರೆಂದು ಆರೋಪಿಸಿದ್ದರು. ಯೋಗಿ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.